ಭೂಸೇನೆ, ವಾಯುಪಡೆ ಮತ್ತು ನೌಕಾದಳ-ಭಾರತದ ತ್ರಿಸೇನಾ ಬಲಕ್ಕೆ ಮಿಲಿಟರಿ ಶಸ್ತ್ರಾಸ್ತ್ರಗಳ ಖರೀದಿ ಪ್ರಕ್ರಿಯೆ

ನವದೆಹಲಿ, ಮೇ 4- ಭೂಸೇನೆ, ವಾಯುಪಡೆ ಮತ್ತು ನೌಕಾದಳ-ಭಾರತದ ತ್ರಿಸೇನಾ ಬಲಕ್ಕೆ ಮಿಲಿಟರಿ ಶಸ್ತ್ರಾಸ್ತ್ರಗಳ ಖರೀದಿ ಪ್ರಕ್ರಿಯೆಗಾಗಿ ಕಾಲಮಿತಿಯ ಕ್ರಿಯಾ ಯೋಜನೆ ರೂಪಿಸಲು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‍ಎಸ್‍ಎ) ಅಜಿತ್ ದೋವಲ್ ನೇತೃತ್ವದ ನೂತನ ಸರ್ವ-ಶಕ್ತ ರಕ್ಷಣಾ ಸಮಿತಿ ನಿರ್ಧರಿಸಿದೆ.

ಗಡಿ ಭಾಗಗಳಲ್ಲಿ ಪಾಕಿಸ್ತಾನ ಮತ್ತು ಚೀನಾದ ಉಪಟಳ ತೀವ್ರಗೊಂಡು ಆತಂಕಕಾರಿ ಸನ್ನಿವೇಶ ಉದ್ಭವಿಸಿರುವ ಸಂದರ್ಭದಲ್ಲೇ ಸಮಿತಿಯ ಈ ನಿರ್ಧಾರ ಮಹತ್ವದ್ದಾಗಿದೆ.

ನಿನ್ನೆ ನಡೆದ ಉದ್ಥಾಟನಾ ಸಭೆ(ಚೊಚ್ಚಲ ಸಭೆ)ಯಲ್ಲಿ ಈ ಬಗ್ಗೆ ಮಹತ್ತರ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆಯೊಂದು ತಿಳಿಸಿದೆ.

ರಕ್ಷಣಾ ಯೋಜನಾ ಸಮಿತಿಯ ಸಭೆಯಲ್ಲಿ ಈ ಮೂರು ಪಡೆಗಳಿಗೆ ಮಿಲಿಟರಿ ಶಸ್ತಾಸ್ತ್ರಗಳನ್ನು ತ್ವರಿತವಾಗಿ ಖರೀದಿಸಲು ತೀರ್ಮಾನಿಸಲಾಗಿದೆ. ಕಾಲಮಿತಿಯೊಳಗೆ ಇದನ್ನು ಅನುಷ್ಠಾನಗೊಳಿಸಲು ಸಮ್ಮ್ಮತಿ ನೀಡಲಾಗಿದೆ ಎಂದು ಸಚಿವಾಲಯ ಹೇಳಿದೆ.

ಅಜಿತ್ ದೋವಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭೂಸೇನೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿ.ಎಸ್. ಧನೋವಾ ಹಾಗೂ ವಾಯುದಳದ ಆಡ್ಮಿರಲ್ ಸುನಿಲ್ ಲಂಬಾ ಪಾಲ್ಗೊಂಡರು.

ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ರಕ್ಷಣಾ ಸಮಿತಿಯಲ್ಲಿ ರಕ್ಷಣಾ ಕಾರ್ಯದರ್ಶಿ ಸಂಜಯ್ ಮಿತ್ರಾ, ಖರ್ಚುವೆಚ್ಚ ಕಾರ್ಯದರ್ಶಿ ಅಜಯ್ ನಾರಾಯಣ್ ಝಾ, ವಿದೇಶಾಂಗ ಕಾರ್ಯದರ್ಶಿ ವಿಜಯ್ ಕೇಶವ್ ಗೋಖಲೆ ಹಾಗೂ ಸಮಗ್ರ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಸತೀಶ್ ದುವಾ ಅವರುಗಳು ಸದಸ್ಯರಾಗಿದ್ದು, ಸಭೆಯಲ್ಲಿ ಹಾಜರಿದ್ದರು.

ಪಾಕಿಸ್ತಾನ ಮತ್ತು ಚೀನಾದಿಂದ ಎದುರಾಗಿರುವ ಆತಂಕವನ್ನು ಪರಿಗಣಿಸಿ ಭಾರತೀಯ ಸೇನಾ ಪಡೆಗಳಿಗೆ ದೀರ್ಘ ಕಾಲದಿಂದ ಬಾಕಿ ಉಳಿದ ಹಾಗೂ ತ್ವರಿತ ಶಸ್ತ್ರಾಸ್ತ್ರಗಳನ್ನು ಹೊಂದಲು ರಕ್ಷಣಾ ಸಚಿವಾಲಯವು ಇತ್ತೀಚೆಗೆ 1,819 ಕೋಟಿ ರೂ. ಮೌಲ್ಯದ 7.40 ಆಕ್ರಮಣಕಾರಿ ರೈಫಲ್‍ಗಳನ್ನು ಹೊಂದುವ ಪ್ರಸ್ತಾವನೆಗೆ ಸಮ್ಮತಿ ನೀಡಿತ್ತು.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ 982 ಕೋಟಿ ರೂ. ವೆಚ್ಚದಲ್ಲಿ ಸೇನಾಪಡೆಗೆ 5,719 ಸ್ನಿಪರ್ ರೈಫಲ್‍ಗಳನ್ನು ಖರೀದಿಸಲು ಅನುಮೋದನೆ ನೀಡಿತ್ತು. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಡಿಎಸಿ ಸಮಿತಿ 15,935 ಕೋಟಿ ರೂ.ಗಳ ಮೌಲ್ಯದ ಶಸ್ತ್ರಾಸ್ತಗಳು ಹಾಗೂ ಅಗತ್ಯ ಸಾಧನೆಗಳನ್ನು ಹೊಂದಲು ಅನುಮತಿ ನೀಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ