ಪ್ರಸಕ್ತ ವಿಧಾನಸಭೆ ಚುನಾವಣೆಯ ಗೆಲುವಿನ ಕಪ್ ಈ ಬಾರಿ ಜೆಡಿಎಸ್ ಪಾಲಾಗುವುದು ಗ್ಯಾರಂಟಿ – ಎಚ್.ಡಿ.ಕುಮಾರಸ್ವಾಮಿ

ವಿಜಯಪುರ, ಮೇ 3-ಪ್ರಸಕ್ತ ವಿಧಾನಸಭೆ ಚುನಾವಣೆಯ ಗೆಲುವಿನ ಕಪ್(ಅಧಿಕಾರ) ಈ ಬಾರಿ ಜೆಡಿಎಸ್ ಪಾಲಾಗುವುದು ಗ್ಯಾರಂಟಿ ಎಂದು ಹೇಳಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 50-50 ಎನ್ನುವ ಮಾತೇ ಇಲ್ಲ ಎಂದು ಕಡ್ಡಿಮುರಿದಂತೆ ಹೇಳಿದರು.
ನಾಗಠಾಣ ವಿಧಾನಸಭಾ ಕ್ಷೇತ್ರದ ಚಡಚಣದಲ್ಲಿ ಏರ್ಪಡಿಸಿದ್ದ ವಿಕಾಸ ಪರ್ವ ಕಾರ್ಯಕ್ರಮದಲ್ಲಿ ಜೆಡಿಎಸ್ ಅಭ್ಯರ್ಥಿ ದೇವಾನಂದ ಚೌಹಾಣ್ ಪರ ಮತ ಯಾಚನೆ ಮಾಡಿ ಮಾತನಾಡಿದ ಅವರು, ಈ ಬಾರಿಯ ವಿಧಾನಸಭೆ ಚುನಾವಣೆ ಅತ್ಯಂತ ಸೂಕ್ಷ್ಮವಾಗಿದ್ದು, ಕಳೆದ 10 ವರ್ಷಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಆಡಳಿತದಿಂದ ಜನ ಬೇಸತ್ತಿದ್ದು, ಈ ಬಾರಿ ಜೆಡಿಎಸ್‍ಗೆ ಆಶೀರ್ವಾದ ಮಾಡಲಿದ್ದಾರೆ ಎಂದರು.
ಕಳೆದ ಮೂರು ವರ್ಷದಲ್ಲಿ 3800ಕ್ಕೂ ಹೆಚ್ಚು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರು ತಮ್ಮ ಹೊಲದಲ್ಲಿ ತೊಗರಿ ಬೆಳೆದರೂ ಮಾರಾಟಕ್ಕಾಗಿ ಸರ್ಕಾರದ ಹಿಂದೆ ಅಲೆದಾಡುವ ಪರಿಸ್ಥಿತಿ ಇದೆ. ತೊಗರಿ ಖರೀದಿ ಹೆಸರಿನಲ್ಲಿ ನಡೆಯುವ ಮಾಫಿಯಾ ನಿಲ್ಲಬೇಕಾದರೆ ಜೆಡಿಎಸ್‍ಗೆ ಮತ ಹಾಕಬೇಕೆಂದು ಮನವಿ ಮಾಡಿದರು.
ದ್ರಾಕ್ಷಿ, ನಿಂಬೆ ಬೆಳೆಗಾರರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಈಗಾಗಲೇ 58 ಸಾವಿರ ಕೋಟಿ ರೂ.ನಷ್ಟು ಬೆಳೆ ಹಾನಿಯಾಗಿದೆ ಎಂದ ಅವರು, ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿರುವ ಬೆಳೆ ಸಾಲವನ್ನು ಅಧಿಕಾರಕ್ಕೆ ಬಂದ ತಕ್ಷಣವೇ ಮನ್ನಾ ಮಾಡುವುದಾಗಿ ಭರವಸೆ ನೀಡಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ರೈತರ ಸಾಲ ಮನ್ನಾ ಮಾಡಿ ಎಂದು ಕೇಳಿದರೆ ನೋಟು ಮುದ್ರಿಸುವ ಯಂತ್ರ ಇಟ್ಟಿಲ್ಲ ಎಂದು ಹೇಳಿದ್ದರು. ಸಹಕಾರಿ ಬ್ಯಾಂಕ್‍ಗಳ ಸಾಲ ಮನ್ನಾ ಮಾಡಿರುವುದಾಗಿ ರಾಜ್ಯಸರ್ಕಾರ ಹೇಳಿದ್ದರೂ ಇದುವರೆಗೂ ಪೂರ್ಣ ಪ್ರಮಾಣದಲ್ಲಿ ಸಾಲ ಮನ್ನಾ ಆಗಿಲ್ಲ. ಆದರೆ ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ, ಮಹಿಳೆಯರ ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡಲಾಗುವುದು ಎಂದರು.
ಈ ಭಾಗದಲ್ಲಿ ಜನರು ಕುಟುಂಬ ನಿರ್ವಹಣೆ ಮಾಡಲಾಗದೆ, ಉದ್ಯೋಗ ಹುಡುಕಿಕೊಂಡು ಗುಳೇ ಹೊರಟಿದ್ದಾರೆ. ಕೂಲಿ ಕೆಲಸವೂ ನೀಡದಂತಹ ಬಿಜೆಪಿ-ಕಾಂಗ್ರೆಸ್ ಸರ್ಕಾರಗಳು ನಿಮಗೇ ಬೇಕೇ ಎಂದು ಪ್ರಶ್ನಿಸಿದರು.
ಅರಣ್ಯ ಇಲಾಖೆಯಲ್ಲೂ ಸಸಿ ನೆಡುವ ಹೆಸರಿನಲ್ಲಿ ಲೂಟಿ ಹೊಡೆಯಲಾಗುತ್ತಿದೆ ಎಂದು ಆರೋಪಿಸಿದರು.
ನಮ್ಮ ಪಕ್ಷ ಅಧಿಕಾರಕ್ಕೆ ಬಂದದ್ದೇ ಆದರೆ ಅನ್ನಭಾಗ್ಯ ಯೋಜನೆಯಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ರದ್ದುಪಡಿಸಲಾಗುವುದು. 5 ಸಾವಿರ ಆದಾಯ ಇರುವ ಪ್ರತಿ ಕುಟುಂಬದ ಹೆಣ್ಣು ಮಕ್ಕಳಿಗೆ ಮಾಸಿಕ 2 ಸಾವಿರ ರೂ. ನೀಡಲಾಗುವುದು ಎಂದು ಭರವಸೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ