ಮೈಸೂರು, ಮೇ 3- ಪ್ರಧಾನಿ ನರೇಂದ್ರಮೋದಿಯವರು ರಾಜ್ಯದಲ್ಲಿ ಚುನಾವಣಾ ಪ್ರಚಾರ ಭಾಷಣದಲ್ಲಿ ನೀಡುತ್ತಿರುವ ಹೇಳಿಕೆಗಳು ಅವರಿಗೆ ತಿರುಗುಬಾಣವಾಗಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದರು.
ತಮ್ಮ ನಿವಾಸದಲ್ಲಿ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಪ್ರಚಾರ ಭಾಷಣದಲ್ಲಿ ನೀಡುತ್ತಿರುವ ಹೇಳಿಕೆಗಳಿಗೆ ರಾಜ್ಯದ ಜನತೆ ತಕ್ಕ ಉತ್ತರ ನೀಡುತ್ತಾರೆ ಎಂದು ಹೇಳಿದರು.
ಬಿಜೆಪಿ-ಜೆಡಿಎಸ್ ಒಳ ಒಪ್ಪಂದದ ಬಗ್ಗೆ ಎರಡೂ ಪಕ್ಷಗಳ ನಾಯಕರು ಭಿನ್ನರೀತಿಯ ಹೇಳಿಕೆ ನೀಡುತ್ತಿದ್ದಾರೆ. ಈ ಬಗ್ಗೆ ಜನತೆಗೆ ಅರಿವಿದೆ. ಮತದಾನದ ದಿನ ಜನ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ನಮ್ಮ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳು ಜನತೆಗೆ ಗೊತ್ತಿದೆ. ಹಾಗಾಗಿ ಕಾಂಗ್ರೆಸ್ ಗೆಲ್ಲುವುದರಲ್ಲಿ ಸಂಶಯವೇ ಇಲ್ಲ ಎಂದು ಹೇಳಿದರು.
ನಾನು ಸ್ಪರ್ಧಿಸುತ್ತಿರುವ ನರಸೀಪುರ ಕ್ಷೇತ್ರದಲ್ಲಿ ಮತದಾರರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಈ ಬಾರಿಯೂ ನಾನೇ ಗೆಲುವು ಸಾಧಿಸುತ್ತೇನೆ. ಕಳೆದ ಐದು ವರ್ಷಗಳಿಂದ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ನನಗೆ ಶ್ರೀರಕ್ಷೆಯಾಗಿವೆ ಎಂದರು.