ಬೆಂಗಳೂರು, ಮೇ 2- ಉತ್ತರ ಕರ್ನಾಟಕ ಭಾಗಕ್ಕೆ ನಾಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಇಬ್ಬರೂ ಒಂದೇ ದಿನ ಚುನಾವಣಾ ಪ್ರಚಾರಕ್ಕೆ ಬರುತ್ತಿರುವುದರಿಂದ ಪ್ರಚಾರದ ಕಣ ಮತ್ತಷ್ಟು ಕಾವೇರುತ್ತಿದೆ.
ಗುಲ್ಬರ್ಗ, ಬಳ್ಳಾರಿಯಲ್ಲಿ ಪ್ರಧಾನಿ ಮೋದಿ ಹಾಗೂ ಬೀದರ್, ಕಲಬುರಗಿ, ಗದಗ, ಹಾವೇರಿ ಜಿಲ್ಲೆಗಳಲ್ಲಿ ರಾಹುಲ್ಗಾಂಧಿ ಅವರು ಚುನಾವಣಾ ಪ್ರಚಾರ ನಡೆಸಲು ಆಗಮಿಸುತ್ತಿರುವುದರಿಂದ ಬಿಸಿಲು ನಾಡಿನ ಜಿಲ್ಲೆಗಳಲ್ಲಿ ರಾಜಕೀಯ ಅಖಾಡದ ರಣಕಣ ಮತ್ತಷ್ಟು ರಂಗು ಪಡೆದುಕೊಳ್ಳಲಿದೆ.
ಉತ್ತರ ಕರ್ನಾಟಕ ಭಾಗಕ್ಕೆ ಏಕಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಎಐಸಿಸಿ ಅಧ್ಯಕ್ಷ ಅಧ್ಯಕ್ಷ ರಾಹುಲ್ ಅವರು ಆಗಮಿಸುತ್ತಿರುವುದು ವಿಶೇಷ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ತಮ್ಮ ನಾಯಕರನ್ನು ಸ್ವಾಗತಿಸಲು ಭರ್ಜರಿ ಸಿದ್ಧತೆ ಮಾಡಿಕೊಳ್ಳತೊಡಗಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಅವರು ನಾಳೆ ಗುಲ್ಬರ್ಗ ಭಾಗದಲ್ಲಿ ಹಾಗೂ ರಾಹುಲ್ಗಾಂಧಿ ಅವರು ಬೀದರ್ ಭಾಗದಲ್ಲಿ ಮಾಡಲಿರುವ ಚುನಾವಣಾ ಪ್ರಚಾರ ಕಾರ್ಯಕ್ರಮ ಸಂಬಂಧ ಆಯಾ ಜಿಲ್ಲೆಗಳಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಸ್ಥಳೀಯ ಪೆÇಲೀಸರ ಜತೆ ಕೇಂದ್ರ ಪಡೆ ನಿಯೋಜನೆ ಮಾಡಲಾಗಿದೆ ಎಂದು ಐಜಿಪಿ ಎಸ್.ಮುರುಗನ್ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರ ಪ್ರವಾಸ: ನಾಳೆ ಪ್ರಧಾನಿಯವರು ಹೈದರಾಬಾದ್ ಕರ್ನಾಟಕದ ಕಲಬುರಗಿ, ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡುವರು.
ನಿನ್ನೆಯಷ್ಟೇ ಕೊಳ್ಳೆಗಾಲ, ಉಡುಪಿ ಹಾಗೂ ಚಿಕ್ಕೋಡಿಯಲ್ಲಿ ಪ್ರಚಾರ ನಡೆಸಿ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ನಾಳಿನ ಪ್ರಚಾರದಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿನಿಧಿಸುವ ಕಲಬುರಗಿಯಲ್ಲಿ ರಣಕಹಳೆ ಮೊಳಗಿಸಲಿದ್ದಾರೆ.
ಇಲ್ಲಿನ ಹೊರವಲಯದಲ್ಲಿ ಬಿಜೆಪಿ ಸಮಾವೇಶ ನಡೆಯಲಿದ್ದು, ಕಲಬುರಗಿ, ಯಾದಗಿರಿ ಜಿಲ್ಲೆಯ ಅಭ್ಯರ್ಥಿಗಳ ಪರ ಮತಯಾಚನೆ ಮಾಡುವರು. ಮೋದಿಯವರೊಂದಿಗೆ ರಾಜ್ಯದ ಯಾವುದೇ ನಾಯಕರು ಭಾಗವಹಿಸುತ್ತಿಲ್ಲ. ಕಾರಣ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುವಂತೆ ವರಿಷ್ಠರು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.
ಕಲಬುರಗಿ ನಂತರ ನರೇಂದ್ರ ಮೋದಿ ಅವರು ಗಡಿನಾಡು ಬಳ್ಳಾರಿಗೆ 3 ಗಂಟೆಗೆ ಆಗಮಿಸಿ ಪ್ರಚಾರ ನಡೆಸಲಿದ್ದಾರೆ. ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಪಕ್ಷವನ್ನು ಬೆಂಬಲಿಸುವಂತೆ ಮತದಾರರಿಗೆ ಮನವಿ ಮಾಡಲಿದ್ದಾರೆ.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ ನಡೆಯಲಿದ್ದು, ಬಹು ವರ್ಷಗಳ ನಂತರ ಪ್ರಧಾನಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭರ್ಜರಿ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ.
ಕಾರ್ಯಕ್ರಮದ ಉಸ್ತುವಾರಿಯನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಚನ್ನಬಸವಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಮೃತ್ಯುಂಜಯ ಜಿನಗ, ಸಂಸದ ಶ್ರೀರಾಮುಲು ಮತ್ತು ಬಳ್ಳಾರಿ ನಗರ ಬಿಜೆಪಿ ಅಭ್ಯರ್ಥಿ ಸೋಮಶೇಖರ ರೆಡ್ಡಿ ವಹಿಸಿಕೊಂಡಿದ್ದಾರೆ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಸೇರಿಸಲು ಬಿಜೆಪಿ ಮುಂದಾಗಿದೆ.
ಬಳ್ಳಾರಿಯಲ್ಲಿ ಪ್ರಚಾರ ನಡೆಸಿದ ಬಳಿಕ ಮೋದಿ ಅವರು ಬೆಂಗಳೂರಿನಲ್ಲಿ ಪ್ರಚಾರ ಮಾಡುವರು. ಕೆಂಗೇರಿಯ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಜಯನಗರ, ಗೋವಿಂದರಾಜನಗರ, ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ , ರಾಜರಾಜೇಶ್ವರಿ ನಗರ,ರಾಜಾಜಿನಗರ, ಮಲ್ಲೇಶ್ವರಂ ಸೇರಿದಂತೆ ಮತ್ತಿತರ ಕ್ಷೇತ್ರಗಳ ಅಭ್ಯರ್ಥಿ ಪರ ಮೋದಿ ಮತ ಯಾಚಿಸಲಿದ್ದಾರೆ.
ರಾಹುಲ್ ಪ್ರವಾಸ: ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ನಾಳೆಯಿಂದ ಎರಡು ದಿನ ಬೀದರ್, ಕಲಬುರ್ಗಿ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.
ನಾಳೆ ಬೆಳಗ್ಗೆ 11.30ಕ್ಕೆ ಬೀದರ್ಗೆ ಬಂದಿಳಿಯುವ ರಾಹುಲ್ಗಾಂಧಿ ಅಲ್ಲಿಂದ ಹೆಲಿಕಾಪ್ಟರ್ನಲ್ಲಿ ಔರಾದ್ಗೆ ತೆರಳಿ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ನಂತರ ಬಾಲ್ಕಿ, ಹುಮ್ನಾಬಾದ್ನಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಲಿರುವ ರಾಹುಲ್ಗಾಂಧಿ ಅಲ್ಲಿಂದ ಬಸ್ನಲ್ಲಿ ಬೀದರ್ಗೆ ತೆರಳಿ ಬಹಿರಂಗ ಸಮಾವೇಶದಲ್ಲಿ ಭಾಗವಹಿಸುವರು. ರಾತ್ರಿ ಬೀದರ್ನಲ್ಲಿ ತಂಗಲಿದ್ದಾರೆ.
ಮರುದಿನ ಕಲಬುರ್ಗಿ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿರುವ ರಾಹುಲ್ಗಾಂಧಿ, ಬೀದರ್ನಿಂದ ಹೆಲಿಕಾಪ್ಟರ್ನಲ್ಲಿ ಕಲಬುರ್ಗಿಯ ಕಲಗಿಗೆ ತೆರಳಲಿದ್ದಾರೆ. ಅಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ನಂತರ ಬೀದರ್ಗೆ ವಾಪಸ್ ಬಂದು ಬೀದರ್ನಿಂದ ಹುಬ್ಬಳ್ಳಿಗೆ ವಿಶೇಷ ವಿಮಾನದಲ್ಲಿ ತೆರಳಲಿದ್ದಾರೆ. ಹುಬ್ಬಳ್ಳಿಯಿಂದ ಗದಗ ಜಿಲ್ಲೆಯ ರೋಣಾ ಕ್ಷೇತ್ರದ ಗಜೇಂದ್ರಗಡದಲ್ಲಿ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಹಾವೇರಿಯ ಶಿಗ್ಗಾಂವ್ನಲ್ಲೂ ಸಮಾವೇಶ ಉದ್ದೇಶಿಸಿ ಮಾತನಾಡಿ, ಅಲ್ಲಿಂದ ಹುಬ್ಬಳ್ಳಿಗೆ ಬಂದು ರಾತ್ರಿ ದೆಹಲಿಗೆ ತೆರಳಲಿದ್ದಾರೆ.
ಈಗಾಗಲೇ ಆರು ಸುತ್ತಿನ ಜನಾಶೀರ್ವಾದ ರ್ಯಾಲಿಯಲ್ಲಿ ರಾಜ್ಯಾದ್ಯಂತ ಪ್ರವಾಸ ಮುಗಿಸಿರುವ ರಾಹುಲ್ಗಾಂಧಿ ಅಭ್ಯರ್ಥಿಗಳು ಆಯ್ಕೆಯಾದ ನಂತರ ಉತ್ತರ ಕನ್ನಡ ಜಿಲ್ಲೆಯಲ್ಲೂ ಒಂದು ಸುತ್ತಿನ ಪ್ರಚಾರ ನಡೆಸಿದ್ದರು.
ಈಗ ಎಂಟನೇ ಬಾರಿಗೆ ರಾಜ್ಯಕ್ಕೆ ಭೇಟಿ ನೀಡುತ್ತಿರುವ ರಾಹುಲ್ಗಾಂಧಿ ನಾಳೆಯಿಂದ ನಾಲ್ಕು ಜಿಲ್ಲೆಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಈ ಮೊದಲು ಜನಾಶೀರ್ವಾದ ರ್ಯಾಲಿಯಲ್ಲಿ ಯಾವ ಜಿಲ್ಲೆಗೆ ಭೇಟಿ ನೀಡಿರಲಿಲ್ಲವೋ ಅಲ್ಲಿಗೆ ತೆರಳಿ ಪ್ರಚಾರ ನಡೆಸಲಿದ್ದಾರೆ.
ಸಿದ್ದರಾಮಯ್ಯ ಪ್ರತ್ಯೇಕ ಪ್ರಚಾರ: ಈವರೆಗೆ ರಾಹುಲ್ಗಾಂಧಿ ಅವರ ಜತೆ ಪ್ರಚಾರ ಸಭೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ದಾವಣಗೆರೆ ಜಿಲ್ಲೆಯಲ್ಲಿ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.
ರಾಹುಲ್ಗಾಂಧಿ ಅವರ ಕಾರ್ಯಕ್ರಮ ಅಚಾನಕ್ಕಾಗಿ ನಿಗದಿಯಾಗಿದೆ. ಆದರೆ, ಸಿದ್ದರಾಮಯ್ಯ ಅವರ ಕಾರ್ಯಕ್ರಮ ಈ ಮೊದಲೇ ನಿಗದಿಯಾಗಿದ್ದಂತೆ ನಾಳೆ ದಾವಣಗೆರೆಯಲ್ಲಿ ಅವರು ಪ್ರಚಾರ ಮಾಡಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತಿತರರು ರಾಹುಲ್ಗಾಂಧಿ ಅವರ ಜತೆ ಕಾಣಿಸಿಕೊಳ್ಳಲಿದ್ದಾರೆ.