ಬೆಂಗಳೂರು, ಮೇ 1-ಸಿದ್ಧಗಂಗಾ ಮಠದ ಮಠಾಧೀಶರಾದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ 111ನೆ ಜನ್ಮೋತ್ಸವ, ಅನುಪಮ ಚರಿತ ಸಂಪುಟ-2 ಕೃತಿ ಬಿಡುಗಡೆ ಹಾಗೂ ಗುರುವಂದನೆ, ವಿಚಾರ ಸಂಕಿರಣ ಶಿವನಗರದ ಸಿದ್ಧಗಂಗಾ ಸಾಮೂಹಿಕ ಭವನ-ಜಂಗಮ ಮಠದಲ್ಲಿಂದು ನಡೆಯಿತು.
ರಾಜ್ಯ ಉಚ್ಚ ನ್ಯಾಯಾಲಯದ ರಿಜಿಸ್ಟ್ರರ್ ಜನರಲ್ ಅಶೋಕ್ ಜಿ.ನಿಜಗಣ್ಣನವರ್ ಮಾತನಾಡಿ, ಇಡೀ ಜಗತ್ತಿಗೆ ದುಡಿಮೆಯ ಕಾಯಕದ ಮಹತ್ವದ ಅರಿವನ್ನು ಮೂಡಿಸಿದವರು ನಡೆದಾಡುವ ದೇವರು ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರು ಎಂದು ಶ್ಲಾಘಿಸಿದರು.
ಶ್ರೀ ಶಿವಕುಮಾರ ಸ್ವಾಮೀಜಿ ಅವರು ನಡೆದು ಬಂದ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ಅವರು ನಿಸ್ವಾರ್ಥ ಮನೋಭಾವದಿಂದ ಅನ್ನ, ಅಕ್ಷರ ನೀಡುವ ಸೇವೆ ಮಾಡಿದಂತಹ ಕಾಯಕ ಜೀವಿ, ಕರ್ಮಯೋಗಿ. ಅಂತಹವರ ಸ್ಮರಣೆಯಿಂದ ನಮ್ಮಂತಹವರ ಜೀವನ ಪಾವನವಾಗಬೇಕು ಎಂದರು.
ಶ್ರೀ ಶಿವಕುಮಾರ ಸ್ವಾಮೀಜಿ ಅವರ ಉದಾತ್ತ, ಆದರ್ಶ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅವರು ಹಾಕಿಕೊಟ್ಟಿರುವ ಮಾರ್ಗ ಎಲ್ಲರಿಗೂ ದಾರಿದೀಪವಾಗಿದೆ ಎಂದು ಬಣ್ಣಿಸಿದರು.
ಬೆಂಗಳೂರಿನ ಲಘು ವ್ಯಾಜ್ಯಗಳ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಸಂದೇಶ್ ಅವರು ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಶ್ರೀ ಸಿದ್ಧಗಂಗಾ ಶ್ರೀಗಳು ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟದಂತೆ ಸರ್ವ ಜನಾಂಗದ ಶಿಕ್ಷಣದ ಕ್ಷೇತ್ರ ಸಿದ್ಧಗಂಗಾ ಮಠವಾಗಿದೆ. ಶ್ರೀಗಳ ಮಾರ್ಗದರ್ಶನದಂತೆ ಒಳ್ಳೆಯ ಸಮಾಜ ಕಟ್ಟುವ ಕೆಲಸದಲ್ಲಿ ಎಲ್ಲರೂ ಕೈ ಜೋಡಿಸಬೇಕಿದೆ ಎಂದರು.
ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್, ಅನುಪಮ ಚರಿತ ಸಂಪುಟ-2ರ ಸಂಪಾದಕ ವಿದ್ವಾನ್ ಡಾ.ಎಂ.ಶಿವಕುಮಾರಸ್ವಾಮಿ ಉಪಸ್ಥಿತರಿದ್ದರು.