ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಮಳೆ: ಇನ್ನೂ ಎರಡು ದಿನ ಮುಂದುವರಿಕೆ

ಬೆಂಗಳೂರು,ಮೇ.01- ವಾತವರಣದಲ್ಲಿ ಉಂಟಾಗಿರುವ ಬದಲಾವಣೆಯಿಂದಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಮಳೆಯಾಗಿದ್ದು, ಇನ್ನೂ ಎರಡು ದಿನ ಮಳೆ ಮುಂದುವರೆಯಲಿದೆ.

ನಿನ್ನೆ ಸಂಜೆ ಹಾಗೂ ಇಂದು ಬೆಳಗ್ಗೆ ಹಲವು ಕಡೆ ಸಾಧಾರಣದಿಂದ ಉತ್ತಮ ಮಳೆಯಾದ ವರದಿಯಾಗಿದ್ದು, ಸಂಜೆ ಮತ್ತೆ ಮಳೆಬರುವ ಮುನ್ಸೂಚನೆಗಳಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.

ತೆಲಂಗಾಣದಿಂದ ತಮಿಳುನಾಡಿನವರೆಗೆ ಹಾಗೂ ಕೇರಳ ಭಾಗದಲ್ಲಿ ಮೋಡಗಳ ಸಾಲು ಹೆಚ್ಚಾಗಿರುವುದರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆಯಾಗಿತ್ತಿದೆ.
ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಮಂಡ್ಯ, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಮಳೆಯಾಗಿದೆ. ಹಾಸನ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಭಾಗಶಃ ಮಳೆಯಾಗಿದೆ. ಅಂಡಮಾನ್ ದ್ವೀಪದ ಬಳಿ ವಾಯುಭಾರದ ಕುಸಿತ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆಯಲಿದೆ ಎಂಬುದನ್ನು ಕಾದುನೋಡಬೇಕಿದೆ.

ಈಗಿರುವ ಹವಾಮಾನ ಮುನ್ಸೂಚನೆ ಪ್ರಕಾರ ಮೇ 4ರ ನಂತರ ಮತ್ತೆ ಮಳೆ ಪ್ರಾರಂಭವಾಗುವ ಸಾಧ್ಯತೆಗಳಿವೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಇಂದು ಬೆಳಗ್ಗೆ ಮಳೆ ಆರಂಭವಾಗಿ, ಜನ ಜೀವನವನ್ನ ಅಸ್ತವ್ಯಸ್ತಗೊಳಿಸಿತು. ಪೂರ್ವ ಹಾಗೂ ದಕ್ಷಿಣ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದರೆ, ಪಶ್ಚಿಮ ಹಾಗೂ ಉತ್ತರ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.
ಕೆಲವೆಡೆ ಗುಡುಗಿನಿಂದ ಕೂಡಿದ ಧಾರಕಾರ ಮಳೆ ಸುರಿದಿದೆ. ಇನ್ನೂ ಎರಡು ದಿನಗಳ ಕಾಲ ಭಾಗಶಃ ಮೋಡ ಕವಿದಿದ್ದು, ಸಂಜೆ ಹಾಗೂ ರಾತ್ರಿ ವೇಳೆಗೆ ಮಳೆ ಬರುವ ಸಾಧ್ಯತೆಗಳಿವೆ ಎಂದು ಹೇಳಿದರು.

ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ಪ್ರಕಾರ ನಗರದಲ್ಲಿ ಬಿದ್ದ ಮಳೆ ಪ್ರಮಾಣ ಈ ರೀತಿಯಿದೆ(ಮಿ.ಮೀ.ನಲ್ಲಿ).
ಮಾರತ್ತಹಳ್ಳಿ-45.5, ದೊಮ್ಮಲೂರು-42, ವನ್ನಾರು ಪೇಟೆ- 30, ರಾಜಾಜಿನಗರ, ವರ್ತೂರು, ಸಿಂಗಸಂದ್ರಗಳಲ್ಲಿ ತಲಾ-15, ಬಸವನಪುರ, ಬೆಳ್ಳಂದೂರು, ಬಿಟಿಎಂ ಲೇಔಟ್‍ಗಳಲ್ಲಿ 16.5, ಬೊಮ್ಮನಹಳ್ಳಿ- 23.5, ಎಚ್.ಎಸ್.ಆರ್.ಲೇಔಟ್-26, ಬೇಗೂರು-17.5, ನಾಗರಬಾವಿ-11, ಅಗ್ರಹಾರ ದಾಸರಹಳ್ಳಿ-12, ಕೋರಮಂಗಲ-22.5, ಹಂಪಿನಗರ-14.5, ಹೊಯ್ಸಳನಗರ-24.5, ಹೋರಮಾವು-13, ಹೂಡಿ-28.5, ವಿದ್ಯಾಪೀಠ, ಹಡಗೂರು, ಗರುಡಾಚಾರ್ ಪಾಳ್ಯ ಹಾಘೂ ದೇವಸಂದ್ರದಲ್ಲಿ ತಲಾ 10.5 ಮಿ.ಮೀಟರ್ ಮಳೆಯಾದ ವರದಿಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ