ಶಾಸಕ ಖಾನ್ ಜಲ ಸೇವೆ ಸ್ಮರಿಸಿದ ಮಹಿಳೆಯರು

ಶಾಸಕ ಖಾನ್ ಜಲ ಸೇವೆ ಸ್ಮರಿಸಿದ ಮಹಿಳೆಯರು
ಬೀದರ: ಬರಗಾಲದ ಸಂದರ್ಭದಲ್ಲಿ ಶಾಸಕ ರಹೀಮ್‍ಖಾನ್ ಅವರು ಮಾಡಿದ ಜಲ ಸೇವೆಯನ್ನು ಮಹಿಳೆಯರು ಸ್ಮರಿಸಿದ ಪ್ರಸಂಗ ನಗರದಲ್ಲಿ ನಡೆಯಿತು.
ಕಾಂಗ್ರೆಸ್ ಅಭ್ಯರ್ಥಿ ರಹೀಮ್‍ಖಾನ್ ಅವರು ಮೈಲೂರು ಹಾಗೂ ಸುತ್ತಮುತ್ತಲಿನ ಕಾಲೊನಿಗಳಲ್ಲಿ ಮತಯಾಚನೆ ನಡೆಸಿದ ವೇಳೆ ಅಜ್ಜಿಯಂದಿರು ಎರಡು ವರ್ಷದ ಹಿಂದೆ ಉಂಟಾಗಿದ್ದ ಭೀಕರ ಬರಗಾಲದ ದಿನಗಳನ್ನು ನೆನಪಿಸಿಕೊಂಡರು.

ಮಳೆ ಕೈಕೊಟ್ಟಿದ್ದರಿಂದ ನೀರಿನ ಸಮಸ್ಯೆ ಉಂಟಾಗಿತ್ತು. ಮನೆಗಳಲ್ಲಿನ ತೆರೆದ ಬಾವಿಗಳು ಒಣಗಿ ಹೋಗಿದ್ದವು. ಹ್ಯಾಂಡ್‍ಪಂಪ್‍ಗಳಲ್ಲೂ ನೀರು ಬರಲಿಲ್ಲ. ಜನ ಹನಿ ಹನಿ ನೀರಿಗಾಗಿಯೂ ಪರದಾಡುವ ಸ್ಥಿತಿ ಎದುರಾಗಿತ್ತು.

ಆ ಸಂದರ್ಭದಲ್ಲಿ ರಹೀಮ್‍ಖಾನ್ ಅವರು ಟ್ಯಾಂಕರ್ ಮೂಲಕ ಜನರ ಮನೆ ಬಾಗಿಲಿಗೆ ನೀರು ಒದಗಿಸಿದ್ದನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಬಾಯಾರಿಕೆ ಆದಾಗ ಜನರಿಗೆ ನೀರು ಕುಡಿಸಿದ ನಿಮ್ಮ ಹೊಟ್ಟೆ ತಣ್ಣಗಿರಲಿ, ಚುನಾವಣೆಯಲ್ಲಿ ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಶುಭ ಹಾರೈಸಿದರು. ಕೆಲವರು ರಹೀಂಖಾನ್ ಅವರ ತಲೆಯ ಮೇಲೆ ಎರಡೂ ಕೈಗಳನ್ನು ಇಟ್ಟು ಆಶೀರ್ವಾದ ಮಾಡಿದರು.

ನಾನು ಅಧಿಕಾರದಲ್ಲಿ ಇಲ್ಲದಿದ್ದಾಗಲೂ ಜನಸೇವೆ ಮಾಡಿಕೊಂಡು ಬಂದಿದ್ದೇನೆ. ಜಲ ಸೇವೆ ಮಾಡಿದ್ದರ ಹಿಂದೆ ಯಾವುದೇ ಉದ್ದೇಶ ಇರಲಿಲ್ಲ. ಅದು ಮಾನವೀಯತೆ ಉಳ್ಳ ಪ್ರತಿಯೊಬ್ಬರ ಧರ್ಮವಾಗಿದೆ. ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ ಅಷ್ಟೇ. ಅದನ್ನು ಈಗಲೂ ನೆನಪಿನಲ್ಲಿಟ್ಟಿರುವ ಜನರಿಗೆ ಚಿರಋಣಿಯಾಗಿದ್ದೇನೆ ಎಂದು ರಹೀಮ್‍ಖಾನ್ ಹೇಳಿದರು.

ನಗರದ ಎಲ್ಲ ಕಡೆ ದಿನದ 24 ಗಂಟೆ ಕುಡಿಯುವ ನೀರು ಪೂರೈಸುವ ಕಾಮಗಾರಿ ಆಗಿಲ್ಲ ಎನ್ನುವ ಆರೋಪದಲ್ಲಿ ಸತ್ಯಾಂಶ ಇಲ್ಲ. ನಗರದ ಶೇ 90 ರಷ್ಟು ಪ್ರದೇಶಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ನಗರದ ಯಾವುದೇ ಪ್ರದೇಶದಲ್ಲಿ ಕಾಮಗಾರಿಯನ್ನು ವೀಕ್ಷಿಸಬಹುದಾಗಿದೆ ಎಂದು ತಿಳಿಸಿದರು.

ನನ್ನ ಅಧಿಕಾರ ಅವಧಿಯಲ್ಲಿ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳು ಆಗಿವೆ. ನಗರದಲ್ಲಿ ನಿರ್ಮಾಣಗೊಂಡಿರುವ ಗುಣಮಟ್ಟದ ರಸ್ತೆಗಳು ನಾವು ಬೀದರನಲ್ಲಿ ಇದ್ದೇವೆಯೋ ಅಥವಾ ಮುಂಬೈ ಇಲ್ಲವೇ ಬೆಂಗಳೂರಿನಲ್ಲಿ ಇದ್ದೇವೆಯೋ ಎನ್ನುವ ಪ್ರಶ್ನೆ ಜನರಲ್ಲಿ ಉದ್ಭವಿಸುವಂತೆ ಮಾಡಿವೆ. ಇಂಥ ಕೆಲಸಗಳು ನನ್ನ ಅವಧಿಯಲ್ಲಿ ಆಗಿದ್ದಕ್ಕೆ ನನಗೆ ಹೆಮ್ಮೆ ಇದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ