ಕುಣಿಗಲ್, ಮೇ 1- ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಒಂದೇ ಕುಟುಂಬದ ಆಡಳಿತ ವೈಖರಿಯನ್ನು ಜನ ನೋಡಿದ್ದು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಹುತ್ರಿದುರ್ಗ ಹೋಬಳಿ ಇಪ್ಪಾಡಿ ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಜನರ ನಿರೀಕ್ಷೆಯಂತೆ ಈ ಬಾರಿ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿಯನ್ನು ಪಕ್ಷ ಆಯ್ಕೆ ಮಾಡಿದೆ. ಯುವಕರಾದರು ಜನಸೇವೆ ಮಾಡಲು ಉತ್ಸುಕರಾಗಿ ಚುನಾವಣೆಗೆ ಡಾ.ರಂಗನಾಥ್ ಸ್ಪರ್ಧೆ ಮಾಡಿದ್ದಾರೆ. ಅವರನ್ನು ಜನರು ಬಹುಮತದಿಂದ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಬಡವರಿಗೆ ಅನ್ನಭಾಗ್ಯ ಯೋಜನೆ ಮುಖಾಂತರ ಹಸಿವು ನೀಗಿಸಿದೆ. ಹೈನುಗಾರಿಕೆ ಕ್ಷೇತ್ರದಲ್ಲಿ ರೈತರಿಗೆ ಒಂದು ಲೀಟರ್ಗೆ 5ರೂ. ಧನ ಸಹಾಯ ನೀಡಿದ ಸರ್ಕಾರವೆಂದರೆ ನಮ್ಮ ಕಾಂಗ್ರೆಸ್ ಸರ್ಕಾರ ಎಂದು ಹೇಳಿದರು.
ಮೋದಿ ಅವರ ಮನ್ ಕೀ ಬಾತ್ನಿಂದ ಗ್ರಾಮೀಣ ಜನರ ಹೊಟ್ಟೆ ತುಂಬಲ್ಲ. ಮೋದಿ ಅವರ ಯೋಜನೆಗಳು ಶ್ರೀಮಂತ ವರ್ಗಕ್ಕೆ ಸೀಮಿತವಾಗಿವೆ. ಗ್ರಾಮೀಣ ಜನತೆಗೆ ಈ ಯೋಜನೆ ತಲುಪಿಲ್ಲ ಹಾಗೂ ಅವರಿಗೆ ಇದೇನೆಂದು ಅರ್ಥವೂ ಆಗಿಲ್ಲ. ಮೋದಿ ಆಟ ರಾಜ್ಯದಲ್ಲಿ ನಡೆಯುವುದಿಲ್ಲ. ಮತ್ತೆ ಕಾಂಗ್ರೆಸ್ ಪಕ್ಷವೇ ಸ್ಥಾಪನೆಯಾಗಲಿದೆ ಎಂದು ಭವಿಷ್ಯ ನುಡಿದರು.
ಈಗಾಗಲೇ ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿಯಿಂದ ಹಲವು ಮುಖಂಡರು ಕಾಂಗ್ರೆಸ್ಗೆ ಸೇರ್ಪಡೆಯಾಗಿ ಡಾ.ರಂಗನಾಥ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಇದರಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ನಿಚ್ಚಳವಾಗಿದ್ದು, ಕಾರ್ಯಕರ್ತರು ಆತಂಕಕ್ಕೀಡಾಗುವ ಅವಶ್ಯಕತೆ ಇಲ್ಲ ಎಂದರು.
ಜಿಪಂ ಸದಸ್ಯರಾದ ಭಾಗ್ಯಮ್ಮ ಕೆಂಪೇಗೌಡ, ಅನುಸೂಯಮ್ಮ, ತಾಪಂ ಸದಸ್ಯ ವಿಶ್ವನಾಥ್, ವಿಎಸ್ಎಸ್ಎನ್ ಅಧ್ಯಕ್ಷ ಐ.ಜಿ.ರಮೇಶ್ ಮತ್ತಿತರರಿದ್ದರು.