ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಪ್ರಧಾನಿ ಮೋದಿ ಸವಾಲು

ಬೆಂಗಳೂರು,ಮೇ1-ಸಂಸತ್‍ನಲ್ಲಿ ನಾನು ಮಾತನಾಡಿದರೆ ಬಿರುಗಾಳಿಯೇ ಏಳುತ್ತದೆ ಎಂದು ಹೇಳುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಕರ್ನಾಟಕದಲ್ಲಿ ಐದು ವರ್ಷ ಆಡಳಿತ ನಡೆಸಿರುವ ನಿಮ್ಮ ಪಕ್ಷದ(ಕಾಂಗ್ರೆಸ್)ಸಾಧನೆಯನ್ನು ಚೀಟಿ ನೋಡಿಕೊಳ್ಳದೆ 15 ನಿಮಿಷ ಹೇಳಲು ಸಾಧ್ಯವಿದೆಯೇ..? ಎಂದು ಪ್ರಧಾನಿ ನರೇಂದ್ರ ಮೋದಿ ಸವಾಲು ಹಾಕಿದ್ದಾರೆ.

ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲ್ಲೂಕಿನ ಸಂತೇಮರಹಳ್ಳಿಯಲ್ಲಿ ಇಂದು ಬಿಜೆಪಿ ಪರ ಪ್ರಚಾರ ನಡೆಸಿದ ಮೋದಿ ಅವರು ತಮ್ಮ 30 ನಿಮಿಷಗಳ ಭಾಷಣದಲ್ಲಿ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಕನ್ನಡಿಗರೆಲ್ಲರಿಗೂ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿಯೇ ಭಾಷಣ ಆರಂಭಿಸಿದ ಮೋದಿ ಅವರು, ಪ್ರಾರಂಭದಲ್ಲಿ ಮಲೆಮಹದೇಶ್ವರ, ಬಿಳಿಗಿರಿ ರಂಗನಾಥ, ದೇವಿ ಮಾರಕ್ಕ , ಹಿಮವತ್ ಗೋಪಾಲಸ್ವಾಮಿ, ಸುತ್ತೂರು ಮಠ, ಕನಕಗಿರಿ, ವರನಟ ಡಾ.ರಾಜ್‍ಕುಮಾರ್, ಹೆಸರಾಂತ ಕವಿ ಜಿ.ಪಿ.ರಾಜರತ್ನಂ ಹೆಸರುಗಳನ್ನು ಸ್ಮರಿಸಿದರು.

ಬಳಿಕ ಭಾಷಣದುದ್ದಕ್ಕೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಹಿಂದಿನ ಯುಪಿಎ ಸರ್ಕಾರದ ವೈಫಲ್ಯ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟೀಕೆಗಳ ಬಾಣ ಬಿಟ್ಟರು.
ಎಲ್ಲಿಯೂ ಕೂಡ ರಾಹುಲ್ ಗಾಂಧಿ ಹೆಸರು ಪ್ರಸ್ತಾಪಿಸದ ಮೋದಿ ಸಂಸತ್‍ನಲ್ಲಿ 15 ನಿಮಿಷ ಮಾತನಾಡಿದರೆ ಬಿರುಗಾಳಿಯೇ ಎದ್ದುಬಿಡುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ. ಕರ್ನಾಟಕದಲ್ಲಿ ಆಡಳಿತ ನಡೆಸಿರುವ ನಿಮ್ಮ ಪಕ್ಷದ ಸಾಧನೆಗಳನ್ನು ನೀವು ಚೀಟಿ ಬರೆದುಕೊಳ್ಳದೆ 15 ನಿಮಿಷ ಮಾತನಾಡಿ ಎಂದು ಬಹಿರಂಗ ಸವಾಲು ಹಾಕಿದರು.
ಕೆಲವರಿಗೆ ಸರ್.ಎಂ.ವಿಶ್ವೇಶ್ವರಯ್ಯ ಎಂಬ ಹೆಸರನ್ನು ಉಲ್ಲೇಖ ಮಾಡಲು ಬರುವುದಿಲ್ಲ. 5 ಬಾರಿ ಕಾಂಗ್ರೆಸ್ ಅಧ್ಯಕ್ಷರು ಕನ್ನಡ, ಇಂಗ್ಲೀಷ್, ಹಿಂದಿ ಇಲ್ಲವೇ ನಿಮ್ಮ ಮಾತೃಭಾಷೆಯಲ್ಲಿ ವಿಶ್ವೇಶ್ವರಯ್ಯನವರ ಹೆಸರು ಹೇಳುತ್ತೀರಾ ಎಂದು ಪ್ರಶ್ನಿಸಿದರು.

ನೀವು ಹೆಸರುವಾಸಿಗಳು:
ಕಾಂಗ್ರೆಸಿಗರು ಯಾವಾಗಲೂ ಹೆಸರುವಾಸಿಗಳು. ಅವರಿಗೆ ಯಾವಾಗಲೂ ಹೆಸರು ಗಳಿಸಿ ಅಭ್ಯಾಸವಿದೆಯೇ ಹೊರತು ಕೆಲಸ ಮಾಡಿರುವುದು ಗೊತ್ತಿಲ್ಲ. ನಾವು ಕೆಲಸ ಮಾಡುತ್ತೇವೆಯೇ ಹೊರತು ಮಾತನಾಡುವುದಿಲ್ಲ ಎಂದು ಕಾಂಗ್ರೆಸ್‍ಗೆ ಚುಚ್ಚಿದರು.

ದೇಶದಲ್ಲಿ 70 ವರ್ಷ ಆಡಳಿತ ನಡೆಸಿದ ಕಾಂಗ್ರೆಸಿಗರು ಜನರಿಗೆ ಕನಿಷ್ಠ ಪಕ್ಷ ವಿದ್ಯುತ್ ಕೂಡ ನೀಡಲು ಸಾಧ್ಯವಾಗಿರಲಿಲ್ಲ. 2005ರಲ್ಲಿ ಕೇಂದ್ರದಲ್ಲಿದ್ದ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ದೇಶದ ಪ್ರತಿಯೊಂದು ಹಳ್ಳಿಗೂ ವಿದ್ಯುತ್ ಪೂರೈಕೆ ಮಾಡುವ ವಾಗ್ದಾನ ಮಾಡಿದ್ದರು.
2014ರವರೆಗೆ ಕೇಂದ್ರದಲ್ಲಿ ನೀವೇ ಆಡಳಿತ ನಡೆಸಿದ್ದೀರಿ. ದೇಶದ ನಾಲ್ಕು ಕೋಟಿ ಕುಟುಂಬಗಳಿಗೆ ವಿದ್ಯುತ್ ಒದಗಿಸಲು ಸಾಧ್ಯವಾಗಿರಲಿಲ್ಲ. ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರನ್ನು ಹೇಗೆ ನಡೆಸಿಕೊಂಡಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಸಂಪುಟದ ನಿರ್ಣಯವನ್ನೇ ಹರಿದು ಹಾಕಿದವರು ನೀವು. ಕಡೆ ಪಕ್ಷ ನಿಮ್ಮ ತಾಯಿಯವರ ಮಾತನ್ನಾದರೂ ನೀವು(ರಾಹುಲ್‍ಗಾಂಧಿ) ಕೇಳಬೇಕಲ್ಲವೆ ಎಂದು ಹರಿಹಾಯ್ದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಕೇವಲ ಎರಡು ಹಳ್ಳಿಗಳಿಗೆ ವಿದ್ಯುತ್ ನೀಡಿದ್ದೀರಿ. ನಮ್ಮ ಯೋಜನೆಯಿಂದಾಗಿ 39 ಹಳ್ಳಿಗಳಿಗೆ ವಿದ್ಯುತ್ ನೀಡುವಂತಾಗಿದೆ. ಕಾಂಗ್ರೆಸ್ ಅಧ್ಯಕ್ಷರಿಗೆ ಇದರ ಬಗ್ಗೆ ಒಂದಿಷ್ಟಾದರೂ ಒಳ್ಳೆಯ ಮಾತನಾಡುವ ಸೌಜನ್ಯವಿಲ್ಲ. ಇತ್ತೀಚೆಗೆ ಅವರು ಮರ್ಯಾದೆ ಇಲ್ಲದಂತೆ ಮಾತನಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. 70 ವರ್ಷ ಆಡಳಿತ ನಡೆಸಿ ಏನೂ ಮಾಡದವರು ಇಂದು ನಮ್ಮನ್ನು ಏನು ಮಾಡಿದ್ದೀರಿ? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಕಾರ್ಮಿಕರು, ಅವರ ಶ್ರಮದಾನದ ಬಗ್ಗೆ ಒಂದಿಷ್ಟು ಗೌರವವಿಲ್ಲದವರು ಕಾಂಗ್ರೆಸ್ಸಿಗರು ಎಂದು ಟೀಕಿಸಿದರು.

ಬಿರುಗಾಳಿ ಎದ್ದಿದೆ:
ಕರ್ನಾಟಕದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ದೆಹಲಿಯಲ್ಲೂ ಇಲ್ಲಿನ ಚುನಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಇಲ್ಲಿ ಬಂದು ನೋಡಿದಾಗ ಗೊತ್ತಾಯಿತು. ಇದು ಕೇವಲ ಅಲೆಯಲ್ಲ. ಪ್ರಚಂಡ ಬಿರುಗಾಳಿಯೇ ಎದ್ದಿದೆ. ಇದಕ್ಕೆ ಕಾಂಗ್ರೆಸ್ ಕೊಚ್ಚಿ ಹೋಗಲಿದೆ ಎಂದು ಮೋದಿ ಭವಿಷ್ಯ ನುಡಿದರು.

ದೆಹಲಿಯಲ್ಲೂ ಬಿಜೆಪಿ ಕರ್ನಾಟಕದಲ್ಲೂ ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು. ನೀವು ನನಗೆ ಬೆಂಬಲ ನೀಡಿದರೆ ಅಭಿವೃದ್ಧಿ ವೇಗ ಇನ್ನಷ್ಟು ಚುರುಕುಗೊಳ್ಳಲಿದೆ ಎಂದು ಮನವಿ ಮಾಡಿದರು.
ನೋಟು ಅಮಾನೀಕರಣದಿಂದ ದೇಶದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕಾಂಗ್ರೆಸಿಗರು ಹಸಿ ಸುಳ್ಳು ಹೇಳುತ್ತಿದ್ದಾರೆ. ಕರ್ನಾಟಕದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ ಕಂತೆ ಕಂತೆ ನಗದು ಸಿಗುತ್ತಿದೆ. ಈ ಹಣ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.

ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅನೇಕ ಜನಪರ ಯೋಜನೆಗಳನ್ನು ಜಾರಿ ಮಾಡಿದೆ. ರೈತರ ಆದಾಯವನ್ನು ದ್ವಿಗುಣಗೊಳಿಲು ಫಸಲು ಭೀಮಾ ಯೋಜನೆ ಅನುಷ್ಠಾನವಾಗಿದೆ. ಇದರಿಂದ ರೈತರ ಬೆಳೆಗಳಿಗೆ ಒಂದೂವರೆ ಪಟ್ಟು ಆದಾಯ ಸಿಗಲಿದೆ. ಕರ್ನಾಟಕದಲ್ಲಿ 14 ಲಕ್ಷ ರೈತರು ಈ ಯೋಜನೆಯ ಫಲಾನುಭವಿಗಳು ಎಂದರು.

ಸ್ವಚ್ಛ , ಸುಂದರ ಕರ್ನಾಟಕ ನಿರ್ಮಾಣಕ್ಕೆ ಬನ್ನಿ. ಎಲ್ಲರೂ ನಮ್ಮ ಜೊತೆ ಕೈ ಜೋಡಿಸಿ ಕಾಂಗ್ರೆಸ್ ಸರ್ಕಾರ ಬದಲಾಯಿಸಿ ಬಿಜೆಪಿ ಗೆಲ್ಲಿಸಿ ಎಂದು ಮೋದಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ , ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಬಾಕ್ಸ್
ಕನ್ನಡಿಗರೆಲ್ಲರಿಗೂ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿಯೇ ಭಾಷಣ ಆರಂಭಿಸಿದ ಮೋದಿ ಅವರು, ಪ್ರಾರಂಭದಲ್ಲಿ ಮಲೆಮಹದೇಶ್ವರ, ಬಿಳಿಗಿರಿ ರಂಗನಾಥ, ದೇವಿ ಮಾರಕ್ಕ , ಹಿಮವದ್, ಗೋಪಾಲಸ್ವಾಮಿ, ಸುತ್ತೂರು ಮಠ, ಕನಕಗಿರಿ, ವರನಟ ಡಾ.ರಾಜ್‍ಕುಮಾರ್, ಹೆಸರಾಂತ ಕವಿ ಜಿ.ಪಿ.ರಾಜರತ್ನಂ ಹೆಸರುಗಳನ್ನು ಸ್ಮರಿಸಿದರು. ಅಲ್ಲದೆ ವಿಶ್ವ ವಿಖ್ಯಾತ ಸರ್.ಎಂ.ವಿಶ್ವೇಶ್ವರಯ್ಯ ಅವರನ್ನು ಹೆಸರನ್ನು ಸ್ಪಷ್ಟವಾಗಿ 5 ಬಾರಿ ಹೇಳುವಂತೆ ರಾಹುಲ್‍ಗಾಂಧಿಗೆ ಸವಾಲು ಹಾಕಿದರು.

2+1 ಫಾರ್ಮುಲ:
ಪ್ರಸ್ತುತ ಕರ್ನಾಟಕದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು 2+1 ಫಾರ್ಮುಲ ಅನುಸರಿಸಿದ್ದಾರೆ ಸಚಿವರು 1+1 ಫಾರ್ಮುಲ ಅನುಸರಿಸುತ್ತಿದ್ದಾರೆ ಎಂದು ಮೋದಿ ವ್ಯಂಗ್ಯವಾಡಿದರು.

ವರುಣಾ, ಚಾಮುಂಡೇಶ್ವರಿ ಹಾಗೂ ಬಾದಾಮಿಯಲ್ಲಿ ಸಿದ್ಧರಾಮಯ್ಯ ಹಾಗೂ ಅವರ ಪುತ್ರ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಅವರು ಸೋಲುವುದರ ಜೊತೆಗೆ ಅವರ ಪುತ್ರನನ್ನು ಬಲಿ ಕೊಡಲು ಸಿದ್ದರಾಗಿದ್ದಾರೆ. ಇನ್ನು ಕೆಲವು ಸಚಿವರು ತಾವು ಸ್ಪರ್ಧಿಸುವುದರ ಜತೆಗೆ ಅವರ ಕುಟುಂಬದವರನ್ನು ಕಣಕ್ಕಿಳಿಸಿದ್ದಾರೆ. ಕುಟುಂಬ ರಾಜಕಾರಣವನ್ನು ಪೆÇೀಷಿಸುವ ಮೂಲಕ ಕಾಂಗ್ರೆಸ್ ಪ್ರಜಾಪ್ರಭುತ್ವವನ್ನು ನಾಶ ಮಾಡಲು ಹೊರಟಿದೆ ಎಂದು ಕಿಡಿಕಾರಿದರು.

10 ಪರ್ಸೆಂಟ್ ಕಮೀಷನ್ ಸರ್ಕಾರವನ್ನು ಬೇರು ಸಮೇತ ಕಿತ್ತು ಹಾಕಬೇಕು. 12ರಂದು ನೀವು ಭವಿಷ್ಯವನ್ನು ನಿರ್ಧರಿಸುವ ಸಮಯ. ಯೋಚಿಸಿ ತೀರ್ಮಾನ ಕೈಗೊಂಡು ಭವಿಷ್ಯದ ಕರ್ನಾಟಕಕ್ಕೆ ನೀವು ಕೂಡ ನನಗೆ ಸಾಥ್ ನೀಡಿ ಎಂದು ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ