ಬೆಂಗಳೂರು,ಮೇ1-ಮುಂದಿನ ಐದು ವರ್ಷಗಳ ರಾಜ್ಯದ ಭವಿಷ್ಯವನ್ನು ತೀರ್ಮಾನಿಸಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬಿಜೆಪಿ ಪರ ಪ್ರಚಾರ ನಡೆಸುವ ಮೂಲಕ ರಣ ಕಹಳೆ ಮೊಳಗಿಸಿದರು.
ಗಡಿಜಿಲ್ಲೆ ಚಾಮರಾಜನಗರದ ಕೊಳ್ಳೆಗಾಲ ತಾಲ್ಲೂಕಿನ ಸಂತೇಮರಹಳ್ಳಿಯಲ್ಲಿ ಇಂದು ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಒಟ್ಟು 22 ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದರು.
ಸಂತೇಮಾರಳ್ಳಿಯ ಪ್ರಚಾರ ನಡೆಸಿದ ನಂತರ ಉಡುಪಿ ಹಾಗೂ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಬಿಜೆಪಿ ಪರ ಮತ ಯಾಚಿಸುವ ಮೂಲಕ ವಿದ್ಯುಕ್ತವಾಗಿ ಚುನಾವಣೆಗೆ ಚಾಲನೆ ನೀಡಿದರು.
ಬೆಳಗ್ಗೆ ನವದೆಹಲಿಯಿಂದ ವಿಶೇಷ ವಿಮಾನದಲ್ಲಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಕೇಂದ್ರ ಸಚಿವ ಅನಂತಕುಮಾರ್, ಮುಖಂಡರಾದ ಜಗದೀಶ್ ಶೆಟ್ಟರ್, ಆರ್.ಅಶೋಕ್, ಸಂಸದರಾದ ಪ್ರಹ್ಲಾದ್ ಜೋಷಿ, ಜಿ.ಎಂ.ಸಿದ್ದರೇಶ್ವರ್, ಪ್ರತಾಪ್ ಸಿಂಹ ಸೇರಿದಂತೆ ಮತ್ತಿತರರು ಆತ್ಮೀಯವಾಗಿ ಬರಮಾಡಿಕೊಂಡರು.
ಅಲ್ಲಿಂದ ಭಾರತೀಯ ವಾಯುಪಡೆಗೆ ಸೇರಿದ ವಿಶೇಷ ಹೆಲಿಕಾಪ್ಟರ್ನಲ್ಲಿ ಸಂತೇಮರಹಳ್ಳಿಗೆ ಆಗಮಿಸಿದ ಮೋದಿ ನೆರೆದಿದ್ದ ಸುಮಾರು 80 ಸಾವಿರಕ್ಕೂ ಹೆಚ್ಚು ಜನಸ್ತೋಮವನ್ನು ಉದ್ದೇಶಿಸಿ ಸುಮಾರು 40 ನಿಮಿಷಗಳ ಕಾಲ ಮಾತನಾಡಿದರು.
ತಮ್ಮ ಮಾತಿನುದ್ದಕ್ಕೂ ಕಾಂಗ್ರೆಸ್, ರಾಜ್ಯ ಸರ್ಕಾರದ ವೈಫಲ್ಯಗಳು ಹಾಗೂ ವಂಶ ಪಾರಂಪರ್ಯ ರಾಜಕಾರಣವನ್ನು ವಾಚಾಮಗೋಚರವಾಗಿ ಮೋದಿ ಟೀಕೆ ಮಾಡಿದರು.
ದೇಶಕ್ಕೆ ಕಾಂಗ್ರೆಸ್ ಎಂದಿಗೂ ಅನಿವಾರ್ಯವಲ್ಲ. ಅಭಿವೃದ್ಧಿ ಏನೆಂಬುದನ್ನು ಮರೆತಿರುವ ಆ ಪಕ್ಷಕ್ಕೆ ಭವಿಷ್ಯವಿಲ್ಲ. ಜೀವನದುದ್ದಕ್ಕೂ ಭ್ರಷ್ಟಾಚಾರ ಹಾಗೂ ವಂಶ ಪಾರಂಪರ್ಯ ರಾಜಕಾರಣವನ್ನೇ ಅನುಸರಿಸಿಕೊಂಡು ಬಂದಿರುವ ಹಳೆಯ ಪಕ್ಷವನ್ನು ಬೆಂಬಲಿಸಿದರೆ ನಿಮಗೂ ಭವಿಷ್ಯವಿಲ್ಲ ಎಂದು ಸಲಹೆ ಮಾಡಿದರು.
ರಾಜ್ಯದಲ್ಲಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೆಸೆದು ಅಭಿವೃದ್ದಿಪರವಾದ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಮತದಾರರ ಮುಂದಾಗಬೇಕು. ಐದು ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ಸಾಧನೆ ಶೂನ್ಯ. ದೇಶದಿಂದ ಕಾಂಗ್ರೆಸ್ನ್ನು ಮುಕ್ತಗೊಳಿಸುವವರೆಗೂ ಭಾರತ ಉದ್ದಾರವಾಗುವುದಿಲ್ಲ. ಯಾವುದೇ ಕಾರಣಕ್ಕೂ ನೀವು ಕಾಂಗ್ರೆಸ್ ಬೆಂಬಲಿಸಬಾರದೆಂದು ಮತದಾರರಲ್ಲಿ ಮನವಿ ಮಾಡಿದರು.
ನೀವು ಹಾಕುವ ಒಂದೊಂದು ಮತವು ಮುಂದಿನ ಐದು ವರ್ಷಗಳ ಭವಿಷ್ಯವನ್ನು ತೀರ್ಮಾನಿಸುತ್ತದೆ. ಕಾಂಗ್ರೆಸ್ನವರು ಮತದಾರರ ಮೂಗಿಗೆ ತುಪ್ಪ ಸವರಿ ಲಾಲಿಪಪ್ ಕೊಡುವುದರಲ್ಲಿ ನಿಸ್ಸೀಮರು. ನೀವು ಯಾವುದೇ ಕಾರಣಕ್ಕೂ ಇಂತಹ ಆಮಿಷಗಳಿಗೆ ಬಲಿಯಾಗದೆ ಬಿಜೆಪಿಯನ್ನು ಬೆಂಬಲಿಸಿ ಕರ್ನಾಟಕದ ಅಭಿವೃದ್ದಿಗೆ ಕೈ ಜೋಡಿಸುವಂತೆ ಕೋರಿದರು.
ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಮಾತನಾಡಿ, ಮೇ 15ರ ಫಲಿತಾಂಶ ರಾಷ್ಟ್ರ ರಾಜಕಾರಣಕ್ಕೆ ದಿಕ್ಸೂಚಿಯಾಗಲಿದೆ. ಭ್ರಷ್ಟ ಕಾಂಗ್ರೆಸ್ನ್ನು ಕರ್ನಾಟಕವನ್ನು ಕಿತ್ತೆಯೆಸಬೇಕು. ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಕಾಲಮಿತಿಯೊಳಗೆ ಈಡೇರಿಸುವುದಾಗಿ ಆಶ್ವಾಸನೆ ನೀಡಿದರು.
ಪ್ರಧಾನಿ ಆಗಮಿಸಿದ ಹಿನ್ನಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸಂತೆಮಾರಹಳ್ಳಿಯಲ್ಲಿ ಭಾರೀ ಭದ್ರತೆ ಕೈಗೊಳ್ಳಲಾಗಿತ್ತು. ಬೆಳಗ್ಗೆಯಿಂದಲೇ ಎಲ್ಲೆಡೆ ಹೈ ಅಲರ್ಟ್ ಘೋಷಿಸಲಾಗಿತ್ತು.