ತುರುವೇಕೆರೆ ವಿಧಾನಸಭಾ ಕ್ಷೇತ್ರವನ್ನು ಮಾದರಿಯನ್ನಾಗಿ ಮಾಡಲು ಬಿಜೆಪಿಗೆ ಮತ:

ತುರುವೇಕೆರೆ,ಮೇ1- ತುರುವೇಕೆರೆ ವಿಧಾನಸಭಾ ಕ್ಷೇತ್ರವನ್ನು ಮಾದರಿಯನ್ನಾಗಿ ಮಾಡಲು ಬಿಜೆಪಿಗೆ ಮತ ನೀಡುವ ಮೂಲಕ ಸಹಕರಿಸಬೇಕೆಂದು ಬಿಜೆಪಿ ಅಭ್ಯರ್ಥಿ ಮಸಾಲಾ ಜಯರಾಮ್ ವಿನಂತಿಸಿಕೊಂಡರು.
ಪಟ್ಟಣದ ಎಲ್ಲಾ ವಾರ್ಡ್‍ಗಳಲ್ಲಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದ ಅವರು, ಪಟ್ಟಣದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಒಳಚರಂಡಿ ನಿಗಮದಿಂದ ಕೋಟ್ಯಾಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ಒಳಚಂರಂಡಿ ಕಾಮಗಾರಿ ಇನ್ನೂ ನೆನಗುದಿಗೆ ಬಿದ್ದಿದೆ. ವಾಣಿಜ್ಯ ಸಂಕೀರ್ಣದ ಕಾಮಗಾರಿ ಕಳೆದ ಏಳೆಂಟು ವರ್ಷಗಳಿಂದ ಹಾಗೆಯೇ ಉಳಿದಿದೆ. ಪಟ್ಟಣದಲ್ಲಿ ನೀರಿನ ವ್ಯವಸ್ಥೆ ಹೇಳಲಾರದ ಸ್ಥಿತಿಯಲ್ಲಿದೆ. ಹಲವಾರು ರಸ್ತೆಗಳು ಸಂಪೂರ್ಣ ಹಾಳಾಗಿದೆ.
ಕ್ಷೇತ್ರದಲ್ಲಿ ನಡೆದಿರುವ ಹಲವಾರು ಕಾಮಗಾರಿಗಳಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ಜನಸಾಮಾನ್ಯರಿಗೆ ಉತ್ತಮ ಆಡಳಿತ ದೊರೆಯುತ್ತಿಲ್ಲ. ಆದ್ದರಿಂದ ಜನರಿಗೆ ಬೇಕಾದ ಗೌರವ, ಶಾಂತಿಯುತ ಕ್ಷೇತ್ರಕ್ಕಾಗಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು. ತಾವೊಬ್ಬ ಸೇವಕನೆಂಬಂತೆ ಮನೆ ಮಗನಾಗಿ ಜನಸಾಮಾನ್ಯರ ಸೇವೆ ಮಾಡುವೆ ಎಂದು ಭರವಸೆ ನೀಡಿದರು.
ಮಾಜಿ ಶಾಸಕ ಹೆಚ್.ಬಿ.ನಂಜೇಗೌಡ, ಮುಖಂಡ ವಿ.ಟಿ.ವೆಂಕಟರಾಮು, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್.ದೇವರಾಜು, ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಹೆಚ್.ಆರ್.ರಾಮೇಗೌಡ, ಪಪಂ ಸದಸ್ಯ ನರಸಿಂಹ ಪ್ರಸಾದ್(ಲಚ್ಚಿ), ಮಾಜಿ ಸದಸ್ಯ ದಿವಾಕರ್, ಎಪಿಎಂಸಿ ಮಾಜಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಬಿಎಂಎಸ್ ಉಮೇಶ್, ಮುಖಂಡರಾದ ಮಂಗಿಕುಪ್ಪೆ ಗಂಗಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಜಯಶೀಲಾ, ಜಿಲ್ಲಾ ಉಪಾಧ್ಯಕ್ಷೆ ಉಮಾರಾಜ್, ನಗರ ಘಟಕದ ಅಧ್ಯಕ್ಷ ನವೀನ್ ಬಾಬು, ಜಗದೀಶ್, ಕೇಬಲ್ ರಾಜು, ವಿ.ಬಿ.ಸುರೇಶ್, ಪಂಚಾಕ್ಷರಿ, ಪದ್ಮಾವೆಂಕಟೇಶ್ ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ