ಬೆಂಗಳೂರು, ಮೇ 1- ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸಾಥ್ ನೀಡಿದ್ದ ಪ್ರಗತಿಪರ ಸಾಹಿತಿಗಳು ಈ ಬಾರಿಯೂ ಕಾಂಗ್ರೆಸ್ ಪರವಾಗಿ ಬಹಿರಂಗ ಪ್ರಚಾರಕ್ಕಿಳಿದಿದ್ದಾರೆ.
ಸಾಹಿತಿಗಳಾದ ಡಾ.ಕೆ.ಮರುಳಸಿದ್ದಪ್ಪ, ಎಸ್.ಜಿ.ಸಿದ್ದರಾಮಯ್ಯ ಅವರು, ಹಿರಿಯ ನಟ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುಖ್ಯಮಂತ್ರಿ ಚಂದ್ರು ಅವರ ಜೊತೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಿರುವ ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಾಳೆ ಬೆಳಗ್ಗೆ ತೆರಳಿ ರೋಡ್ ಶೋ ನಡೆಸಲಿದ್ದು, ನಂತರ ಎಚ್.ಡಿ.ಕೋಟೆ ಕ್ಷೇತ್ರಕ್ಕೆ ತೆರಳಿ ಪ್ರಚಾರ ನಡೆಸುವರು, ಮೇ 3ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸ್ಪರ್ಧಿಸಿರುವ ವರುಣಾ ಕ್ಷೇತ್ರ ಮತ್ತು ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರೋಡ್ ಶೋ ನಡೆಸಲಿದ್ದಾರೆ.
ಮೇ 5ರಂದು ಮುಖ್ಯಮಂತ್ರಿ ಚಂದ್ರು, ಮರುಳಸಿದ್ದಪ್ಪ, ಎಸ್.ಜಿ.ಸಿದ್ದರಾಮಯ್ಯ ಅವರೊಂದಿಗೆ ನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ಜಯಮಾಲ ಕೂಡ ಪ್ರಚಾರದಲ್ಲಿ ತೊಡಗಲಿದ್ದು, ಗದಗ ಜಿಲ್ಲೆಯಲ್ಲಿ ರೋಡ್ ಶೋ ಮಾಡಲಿದ್ದಾರೆ. ಗದಗದಲ್ಲಿ ಅದೇ ದಿನ ನಾಲ್ವರು ಜಂಟಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
ಮೇ 6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪರ್ಧಿಸಿರುವ ಬಾದಾಮಿ ಜಿಲ್ಲೆಯಲ್ಲಿ ರೋಡ್ ಶೋ ನಡೆಸಿ, ಮೇ 7ರಂದು ಬಾದಾಮಿಯಲ್ಲಿ ಪತ್ರಿಕಾಗೋಷ್ಟಿ ನಡೆಸಲಿದ್ದಾರೆ.
2013ರ ವಿಧಾನಸಭೆ ಚುನಾವಣೆಯಲ್ಲಿ ಪ್ರಗತಿಪರ ಸಾಹಿತಿಗಳಾದ ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಮರುಳಸಿದ್ದಪ್ಪ, ಎಸ್.ಜಿ.ಸಿದ್ದರಾಮಯ್ಯ, ಜಿ.ಕೆ.ಗೋವಿಂದರಾವ್, ಕೆ.ಬಿ.ಸಿದ್ದಯ್ಯ ಮತ್ತಿತರರು ಬಹಿರಂಗ ಪ್ರಚಾರದಲ್ಲಿ ಭಾಗಿಯಾಗಿದ್ದರು.
ಅನಂತರ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದ ಕೆಲ ಸಾಹಿತಿಗಳಿಗೆ ವಿವಿಧ ಅಕಾಡೆಮಿಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ನೀಡಲಾಗಿತ್ತು. ಅದರ ಹೊರತಾಗಿಯೂ ಕೆಲ ಸಾಹಿತಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯೋಜನೆಗಳನ್ನು ಸಮರ್ಥಿಸಿ, ಬೆಂಬಲ ವ್ಯಕ್ತ ಪಡಿಸಿದ್ದರು.