ಶಿಕ್ಷಣ ಸಂಸ್ಥೆಗಳಲ್ಲಿ ಉತ್ಸಾಹಿ ಶಿಕ್ಷಕರಿದ್ದರೆ ಮಾತ್ರ ಉತ್ಸಾಹಿ ವಿದ್ಯಾರ್ಥಿಗಳನ್ನು ಹೊರತರಲು ಸಾಧ್ಯ: ಡಾ.ಸಿ.ಎನ್. ಮಂಜುನಾಥ್

ಬೆಂಗಳೂರು,ಮೇ1- ಶಿಕ್ಷಕರಾಗುವ ಪ್ರತಿಯೊಬ್ಬರಿಗೂ ತಮ್ಮ ವೃತ್ತಿ ಮೇಲೆ ಗೌರವವಿರಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಉತ್ಸಾಹಿ ಶಿಕ್ಷಕರಿದ್ದರೆ ಮಾತ್ರ ಉತ್ಸಾಹಿ ವಿದ್ಯಾರ್ಥಿಗಳನ್ನು ಹೊರತರಲು ಸಾಧ್ಯ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಡಾ.ಸಿ.ಎನ್. ಮಂಜುನಾಥ್ ಹೇಳಿದರು.

ಉತ್ತಮ ಬೆಂಗಳೂರಿನ ತಾಜ್ ವಿವಾಂತ್ ಹೊಟೇಲ್‍ನಲ್ಲಿ ಸುರಾನ ಸಮೂಹ ಶಿಕ್ಷಣ ಸಂಸ್ಥೆಯ ಛೇರ್ಮನ್ ಘೇವರ್‍ಚಂದ್ ಸುರಾನ ಅವರ 77ನೇ ಜನ್ಮದಿನೋತ್ಸವ ಅಂಗವಾಗಿ ಸುರಾನ ಶಿಕ್ಷಣ ಸಂಸ್ಥೆ ವತಿಯಿಂದ ನಡೆದ ಉಪನ್ಯಾಸ ಮತ್ತು ವಿವಿಧ ಕ್ಷೇತ್ರಗಳ ಸಾಧಕರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಖಾಸಗಿ ಶಿಕ್ಷಣ ಸಂಸ್ಥೆ ಹಾಗೂ ವಿಶ್ವವಿದ್ಯಾಲಯಗಳು ತಮ್ಮ ಗುರಿ ಮತ್ತು ಸಿದ್ಧಾಂತಗಳನ್ನು ಮರೆಯುತ್ತಿರುವುದರಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿ, ಪ್ರಸ್ತುತ ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ರೋಬೋಟ್ ಮಾದರಿಯ ಶಿಕ್ಷಣವನ್ನು ಬೋಧಿಸುತ್ತಿವೆ. ಇದರಿಂದ ವಿದ್ಯಾರ್ಥಿಗಳು ಮೌಲ್ಯಯುತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಉದ್ಯೋಗ ಮತ್ತು ಹಣ ಸಂಪಾದನೆಗೆ ಶಿಕ್ಷಣ ಪಡೆಯುತ್ತಿರುವುದು ಇಂದು ಹೆಚ್ಚಾಗಿದೆ. ಅದು ಉತ್ತಮ ಗುರಿಯಲ್ಲ. ಶಿಕ್ಷಣದಿಂದ ಹೆಚ್ಚಿನ ಜ್ಞಾನ ಸಂಪಾದಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡುವತ್ತ ಮುಂದಾಗಬೇಕು. ಇದೊಂದು ತಪಸ್ಸು ಎಂಬುದನ್ನು ಅರಿಯಬೇಕು ಎಂದರು.

ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಇಂದು ಸಮಾಜದಲ್ಲಿ ಕೆಟ್ಟ ದೃಷ್ಟಿಯಿಂದ ನೋಡುವಂತಾಗಿದೆ. ಅದನ್ನು ನಿವಾರಿಸಿಕೊಳ್ಳಲು ಸೂಕ್ತ ಪರಿಹಾರ ಕಂಡುಕೊಂಡು ಶಿಕ್ಷಣದ ಗುಣಮಟ್ಟ ಹೆಚ್ಚಿಸಿಕೊಳ್ಳಲು ತಜ್ಞರ ಸಲಹೆ ಸಹಕಾರ ಪಡೆದುಕೊಳ್ಳಬೇಕು. ಅದನ್ನು ತಮ್ಮ ಸಂಸ್ಥೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 17 ಸಾಧಕರಿಗೆ ಸುರಾನ ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ ವಿವಿಧ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ