
ಚಿಕ್ಕಮಗಳೂರು, ಏ.30- ದೇಶದ ಬೆನ್ನೆಲುಬು ರೈತರ ಅಭಿವೃದ್ಧಿಗೆ ಸದಾ ಸಿದ್ಧವಿರುವ ಜೆಡಿಎಸ್ ಪಕ್ಷದಿಂದ ಮಾತ್ರ ರಾಜ್ಯ ಮತ್ತು ಜಿಲ್ಲೆಯ ಅಭಿವೃದ್ಧಿ ಸಾಧ್ಯ ಎಂದು ಜೆಡಿಎಸ್ ರಾಜ್ಯ ವಕ್ತಾರ ಎಸ್.ಎಲ್.ಭೋಜೇಗೌಡ ತಿಳಿಸಿದರು.
ದೇವನೂರು ಗ್ರಾಮದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿ, ಬಿಜೆಪಿ, ಕಾಂಗ್ರೆಸ್ ರಾಷ್ಟ್ರೀಯ ಪಕ್ಷಗಳ ಆಡಳಿತದಿಂದ ಜನತೆ ಹೈರಾಣಾಗಿದ್ದಾರೆ. ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಅದರಲ್ಲೂ ನಿರುದ್ಯೋಗ ಸಮಸ್ಯೆ, ರೈತರ ಅಭಿವೃದ್ಧಿ ಸೇರಿದಂತೆ ಪ್ರಮುಖ ಸಮಸ್ಯೆಗಳು ನಿವಾರಣೆಯಾಗಬೇಕಾದರೆ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಈ ಬಾರಿ ಆಶೀರ್ವದಿಸಬೇಕೆಂದು ತಿಳಿಸಿದರು.
ಮಾಜಿ ಶಾಸಕ ಎಸ್.ಎಲ್.ಧರ್ಮೇಗೌಡ ಮಾತನಾಡಿ, 15 ವರ್ಷದಿಂದ ಶಾಸಕರಾಗಿ ಈ ಭಾಗಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಶಾಸಕರಿಗೆ ಸಾಧ್ಯವಾಗಿಲ್ಲ. ಸುಳ್ಳು ಭರವಸೆ ನೀಡಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಜನರು ಜಾಗೃತರಾಗಿ ಈ ಬಾರಿ ಜೆಡಿಎಸ್ ಬೆಂಬಲಿಸುವಂತೆ ತಿಳಿಸಿದರು.
ರಾಜ್ಯಉಪಾಧ್ಯಕ್ಷ ಹೆಚ್.ಹೆಚ್.ದೇವರಾಜ್ ಮಾತನಾಡಿ, ಶಾಸಕ ಸಿ.ಟಿ.ರವಿ ಅವರು ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಕೊಂಡುಕೊಳ್ಳಲಾಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಜೆಡಿಎಸ್ ಪಕ್ಷದವರು ವ್ಯಾಪಾರಕ್ಕಿಲ್ಲ. ನಿಮ್ಮ ಬೆಲೆ ತಿಳಿಸಿದರೆ ಕೊಂಡುಕೊಳ್ಳುವ ಶಕ್ತಿ ನಮಗಿದೆ ಎಂದರು.
ಜೆಡಿಎಸ್ ಪಕ್ಷದ ಅಭ್ಯರ್ಥಿ ಬಿ.ಹೆಚ್.ಹರೀಶ್ ಮಾತನಾಡಿ, ಜನರ ಸಮಸ್ಯೆಗಳನ್ನು ಸೇವಾ ಮನೋಭಾವನೆಯಿಂದ ಬಗೆಹರಿಸಬೇಕೆ ಹೊರತು ರಾಜಕಾರಣ ಮಾಡಬಾರದು. ಹಣ ಮಾಡುವವರು ನಾವಲ್ಲ , ಬಿಜೆಪಿಯವರು ಸೋಲಿನ ಹತಾಶೆಯಿಂದ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಕ್ಷೇತ್ರ ಸಮಿತಿ ಅಧ್ಯಕ್ಷ ಭೆರೇಗೌಡ, ಪ್ರಧಾನ ಕಾರ್ಯದರ್ಶಿ ಎಂ.ಡಿ.ರಮೇಶ್, ಬಿಎಸ್‍ಪಿ ಪ್ರಧಾನ ಕಾರ್ಯದರ್ಶಿ ಪರಮೇಶ್, ಜೆಡಿಎಸ್ ಮುಖಂಡರಾದ ದೇವಿಪ್ರಸಾದ್, ಕೆಂಚಪ್ಪ, ಕುಮಾರ್, ಲೋಕೇಶ್, ಈಶ್ವರಪ್ಪ, ಚಿಕ್ಕಮಲ್ಲಪ್ಪ ಉಪಸ್ಥಿತರಿದ್ದರು.
ಇದೆ ಸಂದರ್ಭದಲ್ಲಿ ಕಾಂಗ್ರೆಸ್, ಬಿಜೆಪಿಯನ್ನು ತೊರೆದು ನೂರಾರು ಯುವಕರು ಜೆಡಿಎಸ್ ಸೇರ್ಪಡೆಗೊಂಡರು. ನಂತರ ಮೆರವಣಿಗೆ ಮಾಡಿದರು.