ಚುನಾವಣೆ: ಹಣದ ಹೊಳೆ ಹರಿಸಿ, ಮದ್ಯ, ಬಾಡೂಟ ನೀಧುವವರಿಗೆ ಆಯೋಗದ ಕಡಿವಾಣ

ಬೆಂಗಳೂರು, ಏ.29-ಚುನಾವಣೆ ಎಂದರೆ ಹಬ್ಬ, ಜಾತ್ರೆ, ಹಣದ ಹೊಳೆಯನ್ನೇ ಹರಿಸಬಹುದು. ಮದ್ಯಾರಾಧನೆ, ಬಾಡೂಟ ಏನಾದರೂ ಮಾಡಬಹುದು. ಒಟ್ಟಾರೆ ಚುನಾವಣೆ ಸಂದರ್ಭದಲ್ಲಿ ಹಣ ಗಳಿಸಬಹುದು. ಅಂದುಕೊಂಡವರಿಗೆ ಆಯೋಗ ಬಿಗಿಯಾದ ಕಡಿವಾಣ ಹಾಕಿದೆ.
ಹಣ ಅಲುಗಾಡಲು ಬಿಡುತ್ತಿಲ್ಲ. ಅಷ್ಟು ಕಠಿಣವಾದ ಕ್ರಮಗಳನ್ನು ಆಯೋಗ ತೆಗೆದುಕೊಂಡಿದೆ. ಎಲ್ಲ ಕಡೆ ಹದ್ದಿನ ಕಣ್ಣಿಟ್ಟು ಅಕ್ರಮ ಹಣ ಚಲಾವಣೆಯಾಗದಂತೆ ತಡೆಗಟ್ಟಿದ್ದು , ರಾಜಕಾರಣಿಗಳ ಬೆಂಬಲಿಗರ ಕೈ ಕಟ್ಟಿ ಹಾಕಿದೆ.

ಚುನಾವಣಾ ಸಂದರ್ಭದಲ್ಲಿ ಬೇಕಾಬಿಟ್ಟಿಯಾಗಿರಬಹುದು. ಅಷ್ಟೋ ಇಷ್ಟೋ ಗಳಿಸಬಹುದು ಎಂದುಕೊಂಡವರಿಗೆ ಬಹುತೇಕ ನಿರಾಸೆಯಾಗಿದೆ. ಅಭ್ಯರ್ಥಿಗಳು ಯಾರನ್ನಾದರೂ ಹಣದ ಮೂಲಕ ಖರೀದಿ ಮಾಡಬಹುದು. ಸಮುದಾಯ, ಜಾತಿಗಳ, ಸಂಘಟನೆಗಳ ನಾಯಕರಿಗೆ ಹಣ ಕೊಟ್ಟು ಮತ ಗಳಿಸಬಹುದು ಎಂದುಕೊಂಡವರಿಗಂತೂ ತೀವ್ರ ನಿರಾಸೆಯಾಗಿದೆ.
ಕಾರಣ ಹಣ ಚಲಾವಣೆಯಾಗುವ ಎಲ್ಲ ಮೂಲಗಳ ಮೇಲೆ ಆಯೋಗ ಕಣ್ಣಿಟ್ಟಿದೆ. ನೇರ ನಗದು ರವಾನೆ, ಬ್ಯಾಂಕ್‍ಗಳ ಮೂಲಕ ಹಣ ಪಾವತಿ, ಆನ್‍ಲೈನ್ ಮೂಲಕ ಹಣ ಪಾವತಿ ಎಲ್ಲವೂಗಳ ಮೇಲೆ ಆಯೋಗ ಹದ್ದಿನ ಕಣ್ಣಿಟ್ಟಿದೆ.

ಪ್ರತಿ ಬ್ಯಾಂಕ್‍ಗಳಲ್ಲಿ ನಡೆಯುವ ಹಣದ ವಹಿವಾಟಿನ ಮೇಲೆ ನಿಗಾ ಇಟ್ಟಿದ್ದು, ಹೆಚ್ಚಿನ ವಹಿವಾಟು ನಡೆದರೆ ಅವುಗಳ ಮಾಹಿತಿ ಪಡೆದು ತನಿಖೆ ನಡೆಸುತ್ತದೆ. ಎಲ್ಲ ಕಡೆ ಚೆಕ್‍ಪೆÇೀಸ್ಟ್‍ಗಳನ್ನು ಮಾಡಿದ್ದು, ವಾಹನಗಳ ತಪಾಸಣೆ ನಡೆಸುತ್ತಿದೆ.
ತಮ್ಮ ಸ್ವಂತ ಹಣವನ್ನೂ ಕೊಂಡಯ್ಯಲು ಜನ ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಚುನಾವಣೆಗೆಂದು ಹಣ ಸಂಗ್ರಹಿಸಿಟ್ಟುಕೊಂಡವರ ಮಾಹಿತಿಯನ್ನು ಕೂಡ ಕಲೆ ಹಾಕುತ್ತಿದ್ದು , ಈಗಾಗಲೇ ಹಲವೆಡೆ ದಾಳಿ ಕೂಡ ನಡೆದಿದೆ.
ಈ ದಾಳಿ ನಡೆದಿರುವುದರಿಂದ ಹಣದ ಕುಳಗಳು ಬೆಚ್ಚಿಬಿದ್ದಿವೆ. ಚುನಾವಣೆಗೆ ಹಣ ವೆಚ್ಚ ಮಾಡುವುದಿರಲಿ ತಮ್ಮಲ್ಲಿರುವ ಹಣವನ್ನು ರಕ್ಷಿಸಿಕೊಂಡರೆ ಸಾಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಅಭ್ಯರ್ಥಿಗಳು ಹಣ ಖರ್ಚು ಮಾಡಲಾಗದ ಪರಿಸ್ಥಿತಿಯಿಂದ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಪ್ರತಿದಿನ ಕೆಲಸ ಮಾಡುವ ತಮ್ಮ ಬೆಂಬಲಿಗರಿಗೆ ಒಂದಿಷ್ಟು ಖರ್ಚಿಗೆ ಹಣ ಕೊಡಲು ಹೆಣಗಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆಲವರು ಮಾತ್ರ ದಾರಾಳವಾಗಿ ಖರ್ಚು ಮಾಡುತ್ತಿದ್ದಾರೆ. ಅವರಿಗೆ ಎಲ್ಲಿಂದ ಹಣ ಬರುತ್ತದೆ. ಹೇಗೆ ಖರ್ಚು ಮಾಡುತ್ತಾರೆ ಎಂಬುದು ಗೊತ್ತಾಗುತ್ತಿಲ್ಲ. ಕೆಲವರ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ ಎಂಬ ಆರೋಪಗಳು ಕೂಡ ಕೇಳಬರುತ್ತಿವೆ.

ಒಟ್ಟಾರೆ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದರಿಂದ ಹಣದ ಅಷ್ಟಾಗಿ ಹೊಳೆ ಹರಿಯುತ್ತಿಲ್ಲ. ಆದರೂ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಣ ಖರ್ಚು ಮಾಡಿಯೇ ಮಾಡುತ್ತಾರೆ. ಆಯೋಗದ ಕಣ್ತಪ್ಪಿಸಿ ಮತದಾರರ ಮನವೊಲಿಸುವ ಕೆಲಸವನ್ನು ಅಭ್ಯರ್ಥಿಗಳು, ಅವರ ಬೆಂಬಲಿಗರು ಮಾಡುತ್ತಾರೆ. ಪ್ರತಿ ಚುನಾವಣೆಗೂ ಆಯೋಗ ಹೊಸ ಹೊಸ ಕ್ರಮಗಳನ್ನು ಕೈಗೊಳ್ಳುತ್ತಿರುತ್ತದೆ.
ಅಭ್ಯರ್ಥಿಗಳು ಕೂಡ ಮತದಾರರ ಮನವೊಲಿಸಲು ಹೊಸ ಹೊಸ ತಂತ್ರಗಳನ್ನು ಹೆಣೆಯುತ್ತಿರುತ್ತಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ