ಬಿಜೆಪಿಯ ಚುನಾವಣಾ ಪ್ರಣಾಳಿಕೆ ನಾಳೆ ಬಿಡುಗಡೆ

ಬೆಂಗಳೂರು, ಏ.29-ಮುಂದಿನ ಐದು ವರ್ಷಗಳಿಗೆ ರಾಜ್ಯವನ್ನು ಎಲ್ಲಾ ಕ್ಷೇತ್ರಗಳಲ್ಲಿ ಸರ್ವಾಂಗೀಣ ಅಭಿವೃದ್ದಿಪಡಿಸುವ ದೃಷ್ಟಿಯೊಂದಿಗೆ ಬಿಜೆಪಿಯ ಚುನಾವಣಾ ಪ್ರಣಾಳಿಕೆ ನಾಳೆ ಬಿಡುಗಡೆಯಾಗಲಿದೆ.
ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಮಾಜಿ ಸಚಿವ ಎಸ್.ಸುರೇಶ್‍ಕುಮಾರ್ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಈ ಪ್ರಣಾಳಿಕೆಯಲ್ಲಿ ರಾಜ್ಯದ ಮುನ್ನೋಟವನ್ನು ಬಿಂಬಿಸುವ ಹಾಗೂ ಕಾಲಮಿತಿಯೊಳಗೆ ಅನುಷ್ಠಾನ ಮಾಡುವಂತಹ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ರಾಜ್ಯ ಉಸ್ತುವಾರಿ ವಿ.ಮುರುಳೀಧರ್ ರಾವ್, ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್, ಸಹ ಉಸ್ತುವಾರಿ ಪಿಯೂಷ್ ಗೋಯಲ್, ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ರಮೇಶ್ ಜಿಗಜಿಣಗಿ, ಮುಖಂಡರಾದ ಜಗದೀಶ್ ಶೆಟ್ಟರ್, ಆರ್.ಅಶೋಕ್, ಕೆ.ಎಸ್.ಈಶ್ವರಪ್ಪ ಮತ್ತಿತರರು ಬಿಡುಗಡೆ ಮಾಡಲಿದ್ದಾರೆ.

ಈ ಬಾರಿಯ ಪ್ರಣಾಳಿಕೆಯ ವಿಶೇಷವೆಂದರೆ ಯುವಕರು, ಯುವತಿಯರು, ವಿದ್ಯಾರ್ಥಿಗಳು, ಕಾರ್ಮಿಕರು, ಖಾಸಗಿ ಉದ್ಯೋಗಿಗಳು, ಮಹಿಳೆಯರು, ರೈತರು ಸೇರಿದಂತೆ ಮತ್ತಿತರರನ್ನು ಸಂಪರ್ಕಿಸಿ ಅವರ ಅಭಿಪ್ರಾಯಗಳನ್ನು ಪಡೆದು ಪ್ರಣಾಳಿಕೆಯಲ್ಲಿ ಸೇರ್ಪಡೆ ಮಾಡಲಾಗಿದೆ.

ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲೂ ಸಾರ್ವಜನಿಕರಿಂದ ಅಭಿಪ್ರಾಯ ಪಡೆಯಲಾಗಿದ್ದು, ಪ್ರಣಾಳಿಕೆಯಲ್ಲಿ ರಾಜ್ಯದ ಜನತೆಯ ಆಶಯಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಪ್ರಮುಖವಾಗಿ ರಾಜ್ಯವನ್ನು ಕಾಡುತ್ತಿರುವ ರೈತರ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ಒದಗಿಸಲು ರಾಷ್ಟ್ರೀಯ ಹಾಗೂ ಸಹಕಾರಿ ಬ್ಯಾಂಕ್‍ಗಳಿಂದ ಪಡೆದಿರುವ ರೈತರ ಸಾಲಮನ್ನಾಐದು ಲಕ್ಷದವರೆಗೆ ಶೂನ್ಯ ದರದಲ್ಲಿ ಸಾಲ ವಿತರಣೆ, ಹಾಲಿಗೆ ನೀಡಲಾಗುತ್ತಿರುವ ಪೆÇ್ರೀ ಧನ ಹೆಚ್ಚಳ.

ವಿದ್ಯಾರ್ಥಿಗಳಿಗೆ ನೀಡುತ್ತಿರುವ ವಿದ್ಯಾರ್ಥಿ ವೇತನ ಏರಿಕೆ, ವಿಧವೆಯರು, ಹಿರಿಯ ನಾಗರಿಕರಿಗೆ ನೀಡಲಾಗುತ್ತಿರುವ ತಿಂಗಳ ಮಾಶಾಸನವನ್ನು ದುಪ್ಪಟ್ಟು ಮಾಡುವುದು, 10ನೇ ತರಗತಿವರೆಗೂ ಉಚಿತವಾಗಿ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಣೆ, ಹೆಣ್ಣು ಮಕ್ಕಳಿಗೆ ಉಚಿತ ಉನ್ನತ ಶಿಕ್ಷಣ ಸೇರಿದಂತೆ ಜನಪ್ರಿಯ ಯೋಜನೆಗಳಿಗೆ ಒತ್ತು ನೀಡಲಾಗಿದೆ.
ಪ್ರತಿ ವರ್ಷ ಕಾವೇರಿ, ಕೃಷ್ಣ ನೀರಾವರಿ ಯೋಜನೆಗಳಿಗೆ ಬಜೆಟ್‍ನಲ್ಲಿ ಒಂದು ಲಕ್ಷ ಕೋಟಿ ಅನುದಾನ ಮೀಸಲು, ಸೇರಿದಂತೆ ಹತ್ತು ಹಲವು ಜನಪ್ರಿಯ ಯೋಜನೆಗಳನ್ನು ಜಾರಿ ಮಾಡುವ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ