ವಿಧಾನಸಭೆ ಚುನಾವಣೆ: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ 12 ಅಭ್ಯರ್ಥಿಗಳು ಕಣಕ್ಕೆ

ಬೆಂಗಳೂರು, ಏ.26-ಮೇ 12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ 12 ಜನ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದೇವೆ ಎಂದು ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ರೈತ ಸಂಘ ಚುನಾವಣೆಯನ್ನು ಒಂದು ಹೋರಾಟದ ಭಾಗವಾಗಿ ಸ್ವೀಕಾರ ಮಾಡಿದ್ದು, ಎಲ್ಲಿ ಸಾಧ್ಯವೋ ಅಲ್ಲಿ ರೈತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದರು.

ನ್ಯಾಯ, ನೀತಿ ಬಗ್ಗೆ ತಿಳುವಳಿಕೆ ನೀಡಿ ಪ್ರಾಮಾಣಿಕ ಮತದಾರರು ನಮಗೇ ವೋಟ್ ಮಾಡಿ ಎಂಬ ಚುನಾವಣಾ ಜಾಗೃತಿ ಮೂಡಿಸುವ ಮೂಲಕ ಚುನಾವಣೆಯಲ್ಲಿ ನಮ್ಮ ರೈತ ಸಂಘದ 12 ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದೇವೆ ಎಂಧರು.
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ದಿನೇ ದಿನೇ ಕುಸಿಯುತ್ತಿದೆ. ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ನೈತಿಕತೆ ಕಳೆದುಕೊಳ್ಳುತ್ತಿವೆ. ಸಾಮಾಜಿಕ ಭದ್ರತೆಯಾಗಲೀ, ಸಂವಿಧಾನಿಕ ಮೌಲ್ಯಗಳಾಗಲಿ, ಜವಾಬ್ದಾರಿಗಳಾಗಲಿ ಈಗಿನ ರಾಜಕೀಯ ಪಕ್ಷಗಳಲ್ಲಿ ಇಲ್ಲ ಎಂದರು.

ದೇಶದ ಸಂಪತ್ತನ್ನು ಲೂಟಿ ಮಾಡುವ ಲೂಟಿಕೋರರೇ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅತ್ಯಾಚಾರಿಗಳು, ದರೋಡೆಕೋರರು ಕೇವಲ ಅಧಿಕಾರ, ಹಣ ಸಂಪಾದನೆ ಮಾಡಬೇಕೆಂಬ ರಾಜಕೀಯ ಪ್ರವೇಶ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳಿಂದ ಸಮಾಜದ ಸುಧಾರಣೆ ಸಾಧ್ಯವೇ ಎಂದು ಪ್ರಶ್ನಿಸಿದರು.
ರಾಜಕೀಯ ಪಕ್ಷಗಳು ಅಭ್ಯರ್ಥಿಗಳಿಗೆ ರಾಜ್ಯ, ದೇಶದ ಕರ್ತವ್ಯದ ಬಗ್ಗೆ ಯಾವುದೇ ತರಬೇತಿ ನೀಡದೆ ಹಣ ಇದ್ದವರನ್ನು ಹುಡುಕಿ ಅಭ್ಯರ್ಥಿಗಳನ್ನಾಗಿ ಮಾಡುತ್ತಿದ್ದಾರೆ ಎಂದರು.

ನೂರಾರು ಕುಟುಂಬಗಳು ಪಾಳೇಗಾರಿಕೆ ಸಂಸ್ಕøತಿಯನ್ನು ಮೈಗೂಡಿಸಿಕೊಂಡು ಕುಟುಂಬದ ರಾಜಕಾರಣವನ್ನು ಮುಂದುವರೆಸುತ್ತಿರುವುದು ಅಪಾಯಕರ ಸಂಗತಿ ಅಲ್ಲವೇ? ಇದರಿಂದ ಪ್ರಜಾಪ್ರಭುತ್ವ ಉಳಿಯುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಸಜ್ಜನರು, ಆರ್ಥಿಕ ದುರ್ಬಲರು ನೀತಿವಂತನಾಗಿದ್ದರೂ ಸಹ ಚುನಾವಣೆಯಿಂದ ದೂರ ಉಳಿಯುವ ವಾತಾವರಣ ಸೃಷ್ಟಿಯಾಗಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ