ಜಾತಿ-ಧರ್ಮಗಳ ನಡುವೆ ವಿಷ ಬೀಜ ಬಿತ್ತುತ್ತಿರುವ ಕಾಂಗ್ರೆಸ್ ಪಕ್ಷವನ್ನು ಕರ್ನಾಟಕದಿಂದ ಮುಕ್ತಗೊಳಿಸಿ – ಪ್ರಧಾನಿ ನರೇಂದ್ರ ಮೋದಿ

ನವದೆಹಲಿ,ಏ.26-ಜಾತಿ-ಧರ್ಮಗಳ ನಡುವೆ ವಿಷ ಬೀಜ ಬಿತ್ತುತ್ತಿರುವ ಕಾಂಗ್ರೆಸ್ ಪಕ್ಷವನ್ನು ಕರ್ನಾಟಕದಿಂದ ಮುಕ್ತಗೊಳಿಸಿ ಅಭಿವೃದ್ದಿಪರವಾದ ಬಿಜೆಪಿಯನ್ನು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕನ್ನಡಿಗರಿಗೆ ಮನವಿ ಮಾಡಿದ್ದಾರೆ.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಸಂಸದರು, ಶಾಸಕರು, ಅಭ್ಯರ್ಥಿಗಳು ಹಾಗೂ ಪದಾಧಿಕಾರಿಗಳ ಜೊತೆ 40 ನಿಮಿಷಗಳ ಕಾಲ ಸಂವಾದ ನಡೆಸಿದ ನರೇಂದ್ರ ಮೋದಿ ಕರ್ನಾಟಕದ ಚುನಾವಣೆಯಲ್ಲಿ ಅಭಿವೃದ್ಧಿ , ತ್ವರಿತ ಅಭಿವೃದ್ಧಿ ಹಾಗೂ ಸರ್ವಾಂಗೀಣ ಅಭಿವೃದ್ಧಿಯ ಮಂತ್ರವನ್ನು ಜಪಿಸಿದ್ದಾರೆ.
ತಮ್ಮ ಸಂವಾದದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಎಂದಿನಂತೆ ತೀಕ್ಷ್ಣ ಮಾತುಗಳಲ್ಲೇ ಹರಿಹಾಯ್ದ ಅವರು, ಜಾತಿ ಮತ್ತು ಧರ್ಮಗಳ ನಡುವೆ ವಿಷ ಬೀಜ ಬಿತ್ತುವಂತಹ ಹೀನ ಕೃತ್ಯಕ್ಕೆ ಕಾಂಗ್ರೆಸ್ ಇಳಿದಿದೆ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಸುಳ್ಳು ಹೇಳುವ ಆ ಪಕ್ಷವನ್ನು ಜನತೆ ನಂಬುವ ಸ್ಥಿತಿಯಲ್ಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಯು.ಪಿ.ಎ. ಮತ್ತು ಎನ್.ಡಿ.ಎ. ಸರ್ಕಾರದ ಅವಧಿಯಲ್ಲಿನ ಅಭಿವೃದ್ಧಿ ಬಗ್ಗೆ ನೀವೇ ಯೋಚಿಸಿ. ಅಭಿವೃದ್ಧಿ ಆಧಾರದಲ್ಲಿ ಮತ ನೀಡಿ. ಅವರು ಜಾತಿ, ಧರ್ಮದ ಆಧಾರದ ಮೇಲೆ ಚುನಾವಣೆ ನಡೆಸುವ ಅವರು ಜಾತಿ ಎಂಬ ಲಾಲಿಪಪ್ ನೀಡಿ ಚುನಾವಣೆ ನಡೆಸುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕರ್ನಾಟಕ ಜನತೆಯ ದರ್ಶನಕ್ಕೆ ಬರುತ್ತೇನೆ. ಅವರ ಆಶೀರ್ವಾದ ಪಡೆಯುತ್ತೇನೆ. ಮುಂದಿನ ದಿನಗಳಲ್ಲಿ ದೊಡ್ಡ ಯೋಜನೆಗಳು ಬರಲಿವೆ. ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಸುಳ್ಳು ಸಮೀಕ್ಷೆ ನಡೆಸುತ್ತಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಸಂಸ್ಕøತಿಯನ್ನು ದೇಶದಿಂದ ಹೊರ ಹಾಕುವ ತನಕ ನಾವು ನಮ್ಮ ರಾಜಕೀಯ ವ್ಯವಸ್ಥೆಯನ್ನು ಶುದ್ದೀಕರಿಸುವುದು ಅಸಾಧ್ಯ. ಕಾಂಗ್ರೆಸ್ ಮನಸ್ಥಿತಿ ಬದಲಾಗುವವರೆಗೂ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂದರು.
ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸಿಗರು ಮತದಾರರಿಗೆ ಲಾಲಿಪಪ್ ಕೊಡುವುದರದಲ್ಲಿ ನಿಸ್ಸೀಮರು. ಕೇವಲ ಕ್ಷಣಿಕದ ಸುಖಕ್ಕಾಗಿ ಆಸೆಪಟ್ಟರೆ ಐದು ವರ್ಷ ಪಶ್ಚಾತ್ತಾಪ ಪಡಬೇಕಾಗುತ್ತದೆ. ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಬೇರೆ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ಕೆಲವರು ತುದಿಗಾಲಲ್ಲಿ ನಿಂತಿದ್ದಾರೆ. ನನಗೆ ಖಚಿತವಾದ ಭರವಸೆಯಿದೆ. ಕರ್ನಾಟಕದ ಜನತೆ ಈ ಬಾರಿ ಬಿಜೆಪಿಯಲ್ಲಿ ಭಾರೀ ಮತಗಳಿಂದ ಅಧಿಕಾರಕ್ಕೆ ತರುತ್ತಾರೆ ಎಂದರು.
ನೀವು ಹಾಕುವ ಒಂದೊಂದು ಮತವು ದೇಶದ ಭವಿಷ್ಯವನ್ನು ತೀರ್ಮಾನಿಸುತ್ತದೆ. ಅಭಿವೃದ್ಧಿ ಪರವಾದ ಬಿಜೆಪಿ ಬೇಕೋ ? ಬೇಡವೋ ಎಂಬುದನ್ನು ನೀವೇ ತೀರ್ಮಾನಿಸಿ ಎಂದು ಹೇಳಿದರು.
ಕರ್ನಾಟಕ ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಕಾಂಗ್ರೆಸ್‍ನ ಬೇಜವಾಬ್ದಾರಿಯಿಂದಾಗಿ ರಾಜ್ಯ ಇಂದು ಹಿಂದುಳಿದಿದೆ. ಇಂಥ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬಾರದು ಎಂದು ಮನವಿ ಮಾಡಿದರು.
ಭಾರತದ ರಾಜಕೀಯ ವ್ಯವಸ್ಥೆಯಲ್ಲಿರುವ ಇಂದಿನ ಎಲ್ಲ ದೋಷಗಳಿಗೆ ಮೂಲ ಕಾಂಗ್ರೆಸ್ ಎಂಬ ಸತ್ಯವನ್ನು ಯಾರೊಬ್ಬರೂ ನಿರಾಕರಿಸುವುದಿಲ್ಲ. ಕಾಂಗ್ರೆಸ್ ದೇಶದಿಂದ ಹೊರಹೋಗುವ ತನಕ ಅಭಿವೃದ್ಧಿ ಎಂಬುದು ಮರೀಚಿಕೆಯಾಗುತ್ತದೆ. ಮತದಾರರು ಪ್ರಬುದ್ಧರಾಗಿದ್ದು , ಯೋಗ್ಯ ಪಕ್ಷವನ್ನು ಆರಿಸಿಕೊಳ್ಳುವಂತೆ ಸಲಹೆ ಮಾಡಿದರು.
ಅಭಿವೃದ್ಧಿ ಬಗ್ಗೆ ಮಾತನಾಡಲು ಇತರೆ ರಾಜಕೀಯ ಪಕ್ಷಗಳು ಹಿಂದೇಟು ಹಾಕುತ್ತಿವೆ. ಅವರಿಗೆ ವಿಭಜನೆ ಮೇಲೆ ಆಡಳಿತ ನಡೆಸುವ ಇಚ್ಛೆಯಾಗಿದೆ. ವಿಭಜನೆ ಕೇಂದ್ರಿಕೃತವಾದ ಪಕ್ಷಗಳನ್ನು ಜನರು ಸಾರಾಸಗಟಾಗಿ ತಿರಸ್ಕರಿಸಬೇಕು. ಬಿಜೆಪಿ ಯಾವಾಗಲೂ ಅಭಿವೃದ್ದಿ ಮಾರ್ಗದಲ್ಲಿ ಚುನಾವಣೆಯನ್ನು ಎದುರಿಸುತ್ತದೆ ಮತ್ತು ಹೋರಾಡುತ್ತದೆ ಎಂದರು.
ಪಾಪದ ಕೊಡ ತುಂಬಿದಾಗ ಏನೂ ಮಾಡಲು ಸಾಧ್ಯವಿಲ್ಲ. ಅದೇ ರೀತಿ ಕಾಂಗ್ರೆಸ್‍ನ ಪಾಪದ ಕೊಡ ತುಂಬಿದೆ. ಒಂದೊಂದೆ ರಾಜ್ಯದ ಜನತೆ ಅವರನ್ನು ಕಿತ್ತು ಹಾಕುತ್ತಿದ್ದಾರೆ. ಜಾತಿ ಆಧಾರಿತ ರಾಜಕೀಯ ವ್ಯವಸ್ಥೆ ಬಹಳ ದಿನ ನಡೆಯುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಕಾರ್ಯಕರ್ತರನ್ನು ಮರೆಯಬೇಡಿ:
ನಿಮ್ಮ ಗೆಲುವಿಗೆ ಕಾರ್ಯಕರ್ತರೇ ಅಡಿಗಲ್ಲು ಎಂಬುದನ್ನು ಮರೆಯಬೇಡಿ. ಪ್ರತಿದಿನ ನಿಮ್ಮ ಕ್ಷೇತ್ರದಲ್ಲಿರುವ ಕಾರ್ಯಕರ್ತರನ್ನು ಭೇಟಿ ಮಾಡಿ ಅವರ ಯೋಗಕ್ಷೇಮ ವಿಚಾರಿಸಬೇಕು.ಕಷ್ಟಸುಖದಲ್ಲಿ ಭಾಗಿಯಾದರೆ ಮಾತ್ರ ನಿಮ್ಮನ್ನು ಕೈ ಹಿಡಿಯುತ್ತಾರೆ ಎಂದು ಮೋದಿ ಸಲಹೆ ನೀಡಿದರು.
ನೀವು ಎಷ್ಟು ಪುರಷ ಕಾರ್ಯಕರ್ತರಿದ್ದರೋ ಅಷ್ಟೇ ಮಹಿಳಾ ಕಾರ್ಯಕರ್ತರು ಇರಬೇಕು. ಯಾರು ಬೂತ್ ಗೆಲ್ಲುತ್ತಾರೋ ಅವರು ಚುನಾವಣೆಯಲ್ಲಿ ಗೆಲ್ಲುತ್ತಾರೆ. 2020ರೊಳಗೆ ಅಭಿವೃದ್ಧಿಯ ಗುರಿಯನ್ನು ಪೂರ್ಣಗೊಳಿಸುವ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು.
ಯಾವುದೇ ಸಮೀಕ್ಷೆಗಳು ಏನೇ ಹೇಳಿದರೂ ತಲೆಕೆಡಿಸಿಕೊಳ್ಳಬೇಡಿ. ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಅನುಮಾನಬೇಡ. ನಿಮ್ಮ ಮನೆ ಮಗನಾಗಿ ಮತ ಕೇಳಲು ಬರುತ್ತಿದ್ದೇನೆ.ಹರಸಿ ಮತ್ತೊಮ್ಮೆ ಆಶೀರ್ವದಿಸಿ ಎಂದು ವಿನಯಪೂರ್ವಕವಾಗಿ ಕೋರಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ