ಬೆಂಗಳೂರು, ಏ.26-ಡೀಸಲ್ ಬೆಲೆ ಕಡಿಮೆ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಸರಕು ಸಾಗಣೆ ವಾಹನಗಳ ಮಾಲೀಕರ ಸಂಘಗಳ ಮಹಾ ಒಕ್ಕೂಟ ಜೂನ್ 18 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಭಾರತ ಸರಕು ಸಾಗಣೆ ವಾಹನಳ ಮಾಲೀಕರ ಸಂಘಗಳ ಮಹಾ ಒಕ್ಕೂಟದ ಅಧ್ಯಕ್ಷ ಬಿ.ಚನ್ನಾರೆಡ್ಡಿ, 2012 ರಿಂದ ಡೀಸಲ್ ಬೆಲೆ ಸಾಕಷ್ಟು ಹೆಚ್ಚಳವಾಗಿದೆ. ಥರ್ಡ್ ಪಾರ್ಟಿ ಇನ್ಸೂರೆನ್ಸ್ ಪ್ರೀಮಿಯಂನಲ್ಲಿ ಭಾರೀ ಹೆಚ್ಚಳ ಮಾಡಿರುವುದರಿಂದ ವಾಹನಗಳ ಮಾಲೀಕರಿಗೆ ಭಾರೀ ಹೊರೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಎರಡೂ ಪ್ರಮುಖ ಬೇಡಿಕೆಗಳು ಸೇರಿದಂತೆ ವಾಹನ ಮಾಲೀಕರ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸುತ್ತಲೇ ಬಂದರೂ ಪ್ರಯೋಜನವಾಗಿಲ್ಲ. ಹಾಗಾಗಿ ಜೂನ್ 18 ರಿಂದ ದೇಶಾದ್ಯಂತ ಸರಕು ಸಾಗಣೆ ವಾಹನಗಳ ಸಂಚಾರವನ್ನು ಅನಿರ್ದಿಷ್ಟಾವಧಿವರೆಗೂ ಬಂದ್ ಮಾಡಿ ಮುಷ್ಕರದಲ್ಲಿ ತೊಡಗುತ್ತೇವೆ ಎಂದು ಹೇಳಿದರು.
ದೇಶದ ಪ್ರಮುಖ ಸರಕು ಸಾಗಣೆ ವ್ಯವಸ್ಥೆಯಾಗಿರುವ ಟ್ರಕ್ಗಳಿಗೆ ಗಣನೀಯವಾಗಿ ಹೆಚ್ಚಳವಾಗುತ್ತಿರುವ ಇಂಧನ ಬೆಲೆಯಿಂದ ಭಾರೀ ಹೊಡೆತ ಬೀಳುತ್ತಿದೆ. 2012ರಲ್ಲಿ ಡೀಸಲ್ ಬೆಲೆ ಪ್ರತಿ ಲೀಟರ್ಗೆ 45.73 ರೂ. ಇತ್ತು. 2018ರಲ್ಲಿ 66.37 ರೂ.ಗಳಾಗಿವೆ. ಪೆಟ್ರೋಲ್ ಬೆಲೆ 2012 ರಲ್ಲಿ ಲೀಟರ್ಗೆ 73.05 ರೂ. ಇದ್ದುದು ಈಗ 75.06 ರೂ.ಗಳಾಗಿದೆ. ಬೇರೆ ರಾಜ್ಯಗಳಲ್ಲಿ ಇದರ ಬೆಲೆ ಇನ್ನೂ ಹೆಚ್ಚು. ಡೀಸಲ್ ಬೆಲೆ ಹೊಡೆತದ ಜೊತೆಗೆ ಹೆದ್ದಾರಿಗಳಲ್ಲಿ ದುಬಾರಿ ಟೋಲ್ ಕಟ್ಟಲೇಬೇಕಾಗಿರುವುದು ನಮಗೆ ಬಹಳ ಮುಖ್ಯ ತೊಂದರೆಯಾಗಿದೆ ಎಂದು ಹೇಳಿದರು.
ಕೇಂದ್ರ ಪೆಟ್ರೋಲಿಯಂ ಇಲಾಖೆ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಲೇ ಬಂದಿದೆ. ಇದರ ಜೊತೆ ಡೀಸಲ್ ಮೇಲೆ ಅಪಾರ ಪ್ರಮಾಣದ ತೆರಿಗೆ ವಿಧಿಸಲಾಗುತ್ತಿದೆ. ಹಾಗಾಗಿ ಟ್ರಕ್ ಮಾಲೀಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದೇವೆ ಎಂದು ಹೇಳಿದರು.
ಕೇಂದ್ರ ಸರ್ಕಾರಕ್ಕೆ ನಿಜವಾಗಲೂ ಟ್ರಕ್ ಮಾಲೀಕರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಡೀಸಲ್ ಮೇಲೆ ವಿಧಿಸುತ್ತಿರುವ ವಿನಾಕಾರಣದ ದುಬಾರಿ ತೆರಿಗೆಗಳನ್ನು ಕಡಿಮೆ ಮಾಡಬೇಕು, ಡೀಸಲ್ ಬೆಲೆಯನ್ನು ಕಡಿಮೆ ಮಾಡಬೇಕೆಂದು ಚನ್ನಾರೆಡ್ಡಿ ಆಗ್ರಹಿಸಿದರು.
ನಮ್ಮ ಈ ಬೇಡಿಕೆಗಳನ್ನು ಜೂನ್ 18ರೊಳಗೆ ಕೇಂದ್ರ ಸರ್ಕಾರ ಈಡೇರಿಸದಿದ್ದರೆ ಅಂದಿನಿಂದ ದೇಶಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಅನಿವಾರ್ಯವಾಗಿ ಹಮ್ಮಿಕೊಳ್ಳುತ್ತೇವೆ ಎಂದು ಚನ್ನಾರೆಡ್ಡಿ ಎಚ್ಚರಿಸಿದರು.