ಒಂದೇ ಚುನಾವಣೆಯಲ್ಲಿ ಇಬ್ಬರು ಮಕ್ಕಳ ಕಣಕ್ಕಿಳಿಸಿದ ಚಾಣಾಕ್ಷ: ವಿಧಾನಸಭೆಗೆ ಆಯ್ಕೆಯಾಗಲಿದ್ದಾರೆಯೇ ಕೆ.ಎಚ್.ಮುನಿಯಪ್ಪ ಪುತ್ರಿಯರು…?

ಬೆಂಗಳೂರು, ಏ.26- ರಾಜ್ಯ ರಾಜಕಾರಣದಲ್ಲಿ ಒಂದೇ ಚುನಾವಣೆಯಲ್ಲಿ ಇಬ್ಬರು ಮಕ್ಕಳನ್ನು ಚುನಾವಣೆಯ ಕಣಕ್ಕಿಳಿಸಿದ ಉದಾಹರಣೆ ಅಪರೂಪ, ಅಂತಹ ಚಾಣಾಕ್ಷತನವನ್ನು ಸಂಸದ ಕೆ.ಎಚ್.ಮುನಿಯಪ್ಪ ಯಶಸ್ವಿಯಾಗಿ ಸಾಧಿಸಿ ತೋರಿಸಿದ್ದಾರೆ.
ಕೋಲಾರದ ಸಂಸದರಾಗಿರುವ ಕೆ.ಎಚ್.ಮುನಿಯಪ್ಪ ಅವರ ಇಬ್ಬರು ಪುತ್ರಿಯರಾದ ರೂಪ ಶಶಿಧರ್ ಮತ್ತು ನಂದಿನಿ ಅವರು ವಿಧಾನಸಭಾ ಚುನಾವಣೆಯ ಕಣದಲ್ಲಿದ್ದಾರೆ. ರೂಪ ಅವರಿಗೆ ಕಾಂಗ್ರೆಸ್ ಬಿ ಫಾರಂ ಧಕ್ಕಿದ್ದರೆ, ನಂದಿನಿ ಅವರು ನಿರಾಯಸವಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದಾರೆ.
ಇದಕ್ಕಿಂತ ಶಾಕಿಂಗ್ ನ್ಯೂಸ್ ಎಂದರೆ, ಮುಳಬಾಗಿಲು ಮೀಸಲು ಕ್ಷೇತ್ರದ ಅಭ್ಯರ್ಥಿ ಕೊತ್ತನೂರು ಮಂಜುನಾಥ್ ಅವರ ನಾಮಪತ್ರ ತಿರಸ್ಕøತವಾಗಲಿದೆ ಎಂದು ನನಗೆ ಮೊದಲೇ ಗೋತ್ತಿತ್ತು ಎಂದು ಮುನಿಯಪ್ಪ ಹೇಳಿರುವುದು.

ಬೆಂಬಲಿಗರ ಸಭೆಯಲ್ಲಿ ಲೀಲಾಜಾಲವಾಗಿ ಮಾತನಾಡಿರುವ ಸಂಸದ ಮುನಿಯಪ್ಪ , ಕೋತ್ತನೂರು ಮಂಜುನಾಥ್ ಬೈರಾಗಿ ಜಂಗಮ ಜಾತಿಯವರಾಗಿದ್ದು ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ಇಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬುಡಗ ಜಂಗಮ ಜಾತಿಯ ಪ್ರಮಾಣ ಪತ್ರ ನೀಡಿದ್ದರು. ಅದು ಕೋರ್ಟ್‍ನಲ್ಲಿ ಊರ್ಜಿತವಾಗುವುದಿಲ್ಲ ಎಂದು ನನಗೆ ಗೋತ್ತಿತ್ತು. ಒಂದು ವೇಳೆ ಕಾಂಗ್ರೆಸ್ ಬಿ-ಫಾರಂ ಕೊಟ್ಟು ಚುನಾವಣೆಗೆ ನಿಲ್ಲಿಸಿದರೂ, ಚುನಾವಣಾ ಆಯೋಗ ಜಾತಿ ಪ್ರಮಾಣ ಪತ್ರ ಇಲ್ಲದ ಕಾರಣಕ್ಕೆ ಆತನ ನಾಮಪತ್ರ ತಿಸ್ಕರಿಸುತ್ತದೆ. ಪರಿಶಿಷ್ಠಜಾತಿಯ ಪ್ರಮಾಣ ಪತ್ರ ತರಲು ಮಂಜುನಾಥ್ ಕೈನಲ್ಲಿ ಸಾಧ್ಯವಾಗುವುದಿಲ್ಲ. ಚುನಾವಣಾಧಿಕಾರಿ ನಾಮ ಪತ್ರ ತಿರಸ್ಕರಿಸುತ್ತಾರೆ. ಇದು ನನಗೆ ಮೊದಲೇ ಗೋತ್ತಿತ್ತು ಎಂದು ಹೇಳಿದ್ದಾರೆ.

ಅದಕ್ಕಾಗಿಯೇ ಮುಂಚಿತವಾಗಿ ನನ್ನ ಎರಡನೆ ಮಗಳಿಂದ ಮುಳಬಾಗಿಲು ಕ್ಷೇತ್ರಕ್ಕೆ ನಾಮಪತ್ರ ಹಾಕಿಸಿದ್ದೆ. ನಮ್ಮ ಪಾರ್ಟಿಯ ಒಳಜಗಳದಿಂದ ಮಂಜುನಾಥ್‍ನಿಗೆ ಯಾವ ಶಾಸಕರು ಬೆಂಬಲ ನೀಡುವುದಿಲ್ಲ. ಸಚಿವ ರಮೇಶ್ ಕುಮಾರ್ ಮಾತ್ರ ಮಂಜುನಾಥ್ ಬೆಂಬಲಕ್ಕಿದ್ದಾರೆ. ಮುನಿಯಪ್ಪನ ಜೊತೆ ಹೋಗ ಬೇಡಪ್ಪ ನಿನಗೆ ಸ್ಪರ್ಧಿಸುವ ಅವಕಾಶ ತಪ್ಪಿಸುತ್ತಾರೆ ಎಂದು ಮಂಜುನಾಥ್‍ಗೆ ಹೇಳಿ ಕೊಡುತ್ತಿದ್ದಾರೆ ಎಂದು ಮುನಿಯಪ್ಪ ಬೆಂಬಲಿಗರಿಗೆ ಹೇಳಿದ್ದಾರೆ.
ಈ ವಿಡೀಯೋ ಈಗ ಜಿಲ್ಲೆಯಾದ್ಯಂತ ವೈರಲ್ ಆಗಿದೆ. ಮುಂಜುನಾಥ್ ಬೆಂಬಲಿಗರು ಮುನಿಯಪ್ಪ ಅವರ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ರಣತಂತ್ರ:
ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಕೊತ್ತನೂರು ಮಂಜುನಾಥ್ ಗೆದ್ದಿದ್ದರು. ಇತ್ತೀಚೆಗಷ್ಟೇ ಅವರನ್ನು ಕಾಂಗ್ರೆಸ್‍ಗೆ ಅಧಿಕೃತವಾಗಿ ಸೇರಿಕೊಳ್ಳಲಾಗಿತ್ತು. ಜಿಲ್ಲೆಯಾದ್ಯಂತ ಹಲವಾರು ಕಾಂಗ್ರೆಸ್ ಕಾರ್ಯಕ್ರಮಗಳ ಆಯೋಜನೆಯಲ್ಲಿ ಮಂಜುನಾಥ್ ಪ್ರಮುಖ ಪಾತ್ರ ವಹಿಸಿದ್ದರು. ಗೆಲ್ಲುವ ಅಭ್ಯರ್ಥಿ ಮತ್ತು ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ ಎಂಬ ಕಾರಣಕ್ಕೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಟಿಕೆಟ್ ಕೊಡಿಸಲು ಮುನಿಯಪ್ಪ ಕೂಡ ಬೆಂಬಲವಾಗಿ ನಿಂತಿದ್ದರು.

ಮಂಜುನಾಥ್ ಅವರ ಜಾತಿ ಪ್ರಮಾಣ ಪತ್ರ ಊರ್ಜಿತವಾಗುವುದಿಲ್ಲ, ನಾಮಪತ್ರವೂ ಸಿಂಧುವಾಗುವುದಿಲ್ಲ ಎಂದು ಗೋತ್ತಿದ್ದೆ ಮುನಿಯಪ್ಪ, ಕೊತ್ತನೂರು ಅವರಿಗೆ ಟಿಕೆಟ್ ಕೊಡಿಸಿದ್ದಾರೆ ಎಂಬ ವಿಷಯ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ತಮ್ಮ ಒಬ್ಬ ಮಗಳಿಗೆ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಬೀರಿ ಟಿಕೆಟ್ ಕೊಡಿಸಿದ್ದರು, ಕೆಜೆಎಫ್‍ನಿಂದ ರೂಪ ಶಶಿಧರ್ ಕಣಕ್ಕಿಳಿದಿದ್ದಾರೆ. ಕೊತ್ತನೂರು ಮಂಜುನಾಥ್‍ಗೆ ಭಿ-ಫಾರಂ ಕೊಟ್ಟಿದ್ದರೂ, ತಮ್ಮ ಇನ್ನೊಬ್ಬ ಪುತ್ರಿ ನಂದಿನಿ ಅವರಿಂದ ಮುಳಬಾಗಿಲು ಕ್ಷೇತ್ರಕ್ಕೆ ನಾಮಪತ್ರ ಹಾಕಿಸಿದ್ದರು. ಮಂಜುನಾಥ್ ಅವರ ನಾಮಪತ್ರ ಅಸಿಂಧುವಾಗುತ್ತಿದ್ದಂತೆ ನಂದಿನಿ ಅವರನ್ನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂದು ಘೋಷಿಸಲಾಗಿದೆ.

ಅಲ್ಲಿಗೆ ತಮ್ಮಿಬ್ಬರು ಮಕ್ಕಳನ್ನು ಮುನಿಯಪ್ಪ ನಿರಾಯಾಸವಾಗಿ ಕಾಂಗ್ರೆಸ್ ಅಭ್ಯರ್ಥಿಗಳನ್ನಾಗಿ ಮಾಡಿದ್ದಾರೆ. ಕಾಂಗ್ರೆಸ್‍ನಂತಹ ರಾಷ್ಟ್ರೀಯ ಪಕ್ಷದಲ್ಲಿ ತನ್ನಿಬ್ಬರು ಮಕ್ಕಳನ್ನು ಚುನಾವಣೆಗೆ ಇಳಿಸಿದ್ದು ಮುನಿಯಪ್ಪ ಅವರ ಚಾಣಾಕ್ಷತನತಕ್ಕೆ ಹಿರಿಯ ನಾಯಕರೆ ದಂಗು ಬಡಿದಂತಾಗಿದ್ದಾರೆ.
ಕಳೆದ ಚುನಾವಣೆಯಲ್ಲಿ ವರ್ತೂರು ಪ್ರಕಾಶ್ ಅವರ ಗೆಲುವಿಗೆ ಮುನಿಯಪ್ಪ ಅವರ ಬೆಂಬಲವೂ ಇತ್ತು ಎಂದು ಎಂಬ ವದಂತಿಗಳಿದ್ದವು. ರಾಜಕೀಯ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದು, ಅದಕ್ಕೂ ಮುನ್ನಾ ಜಿಲ್ಲೆಯಲ್ಲಿ ಸಂಪೂರ್ಣ ಹಿಡಿತ ಸಾಧಿಸಲು ರಣ ತಂತ್ರ ರೂಪಿಸಿದ್ದಾರೆ.

ಮುಳವಾಗಿಲು ಮೀಸಲು ಕ್ಷೇತ್ರದಲ್ಲಿ ನಾಮಪತ್ರ ಅಸಿಂಧುವಾದರೆ ಯಾವುದಕ್ಕೂ ಇರಲಿ ಎಂದು ಕೊತ್ತನೂರು ಮಂಜುನಾಥ್‍ರಿಂದ ಕೋಲಾರ ಸಾಮಾನ್ಯ ಕ್ಷೇತ್ರದಿಂದಲ್ಲಿ ಪಕ್ಷೇತರಾಗಿ ನಾಮಪತ್ರ ಹಾಕಿಸಿದ್ದರು. ಅಲ್ಲಿ ಕಳೆದ ಬಾರಿ ಗೆದ್ದಿದ್ದ ವರ್ತೂರು ಪ್ರಕಾಶ್ ಈ ಬಾರಿ ಪಕ್ಷೇತರಾಗಿ ಸ್ಪರ್ಧಿಸಿದ್ದರು. ಈಗ ಕೊತ್ತನೂರು ಮಂಜುನಾಥ್ ಅವರಿಗೆ ಪ್ರಬಲ ಎದುರಾಳಿಯಾಗುವ ಸಾಧ್ಯತೆಯಿದೆ. ಈ ಮೂಲಕ ಜಿಲ್ಲೆಯಲ್ಲಿ ಪ್ರಬಾವಿ ರಾಜಕಾರಣಿಗಳಾಗುವ ಸಾಧ್ಯತೆ ಇರುವ ಇಬ್ಬರು ನಾಯಕರನ್ನು ಮುನಿಯಪ್ಪ ತಮ್ಮ ತೆಕ್ಕೆಯಲ್ಲಿರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕೋಲಾರಕ್ಕೆ ವಿ.ಆರ್.ಸುದರ್ಶನ್ ಪ್ರಬಲ ಆಕಾಂಕ್ಷಿಯಾಗಿದ್ದರು. ಅವರಿಗೆ ಟಿಕೆಟ್ ನಿರಾಕರಿಸಿ, ಜಮೀರ ಪಾಷಾ ಅವರಿಗೆ ಟಿಕೆಟ್ ಕೊಡಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ