ಬೆಂಗಳೂರು,ಏ.26- ಕೇಂದ್ರ ಸರ್ಕಾರವು ವಚನಭ್ರಷ್ಟನಾಗಿ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದೆ. ಈಗಲಾದರೂ ನುಡಿದಂತೆ ನಡೆ ಎಂಬ ಬಸವಣ್ಣನವರ ತತ್ವವನ್ನು ಅಳವಡಿಸಿಕೊಳ್ಳಬೇಕೆಂದು ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷ ಶಾಂತವೀರ ನಾಯ್ಕ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ ಹಾಕುವುದಾಗಿ ಜೊತೆಗೆ ದೇಶದ ಪ್ರತಿಯೊಬ್ಬರಿಗೂ ಉದ್ಯೋಗ ನೀಡುವುದಾಗಿ ಭರವಸೆ ನೀಡಿದರು. ಆದರೆ ಅಧಿಕಾರಕ್ಕೆ ಬಂದ ತಕ್ಷಣವೇ ವಚನ ಭ್ರಷ್ಟರಾಗಿ ಸರ್ವಾಧಿಕಾರಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದರು.
ಈ ಎರಡು ಯೋಜನೆಯನ್ನೂ ತುರ್ತಾಗಿ ಮಾಡಿ ಜನರ ಸಂಕಷ್ಟ, ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಮೋದಿ ಅವರು ಜನ ವಿರೋಧಿ ನೀತಿಗಳಾದ ನೋಟ್ ಬ್ಯಾನ್,ಜಿಎಸ್ಟಿ ಹಾಗೂ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ ಹಾಗೂ ಕಾರ್ಮಿಕ ವಿರೋಧಿ ನೀತಿಗಳಿಂದ ಅಸಂಘಟಿತ ಕಾರ್ಮಿಕರು ಅತ್ಯಂತ ಸಂಕಷ್ಟದಲ್ಲಿದ್ದು, ಉದ್ಯೋಗವಿಲ್ಲದೆ ಬೀದಿ ಪಾಲಾಗುತ್ತಿದ್ದಾರೆ. ಇವರ ಕುಟುಂಬ ಸಂಕಷ್ಟದಲ್ಲಿದೆ.ಇವರುಗಳ ಶ್ರೇಯೋಭಿವೃದ್ದಿಗಗಿ ಯಾವುದೇ ಯೋಜನೆಗಳನ್ನು ಕೇಂದ್ರ ಸರ್ಕಾರ ರೂಪಿಸದೆಇರುವುದು ಖಂಡನೀಯ ಎಂದರು.
ದೇಶದ ರಾಷ್ಟ್ರೀಯ ಪಕ್ಷವೊಂದು ಸಮಾಜದಲ್ಲಿ ನಿರ್ಲಕ್ಷ್ಯ, ತುಳಿತಕ್ಕೆ ಸಮಾಜದ ಕಟ್ಟಕಡೆಯ ತುದಿಯಲ್ಲಿರುವ ಮತ್ತು ಎಲ್ಲ ರೀತಿ ಹಿಂದುಳಿದಿರುವ ವಲಯಗಳಿನ ಅಸಂಘಟಿತ ಕಾರ್ಮಿಕರನ್ನು ಒಗ್ಗೂಡಿಸಿ ಜನಜಾಗೃತಿ ಮೂಡಿಸಿ ಸಮಾಜದ ಮುಖ್ಯ ವಾಹಿನಿಗೆ ತರಲು ಕಾಂಗ್ರೆಸ್ ಪಕ್ಷವು ಅವಕಾಶ ಕಲ್ಪಿಸುತ್ತಿದೆ ಎಂದು ಪ್ರಶಂಸಿಸಿದರು.