ಅಧಿಕಾರಕ್ಕಾಗಿ ಬದ್ಧ ವೈರಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮೈತ್ರಿ !

ಐಜ್ವಾಲ್. ಏ.26-ಈಶಾನ್ಯ ಭಾರತದ ಮಿಜೋರಾಂ ರಾಜ್ಯ ಸ್ಥಳೀಯ ಮಂಡಳಿಯೊಂದರ ಅಧಿಕಾರಕ್ಕಾಗಿ ಬದ್ಧ ವೈರಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮೈತ್ರಿ ಏರ್ಪಟ್ಟಿರುವುದು ರಾಜಕೀಯ ವಲಯವನ್ನು ನಿಬ್ಬೆರಗಾಗಿಸಿದೆ. ಕಡು ರಾಜಕೀಯ ಶತ್ರು ಪಕ್ಷಗಳು ಪರಸ್ಪರ ಕೈ ಜೋಡಿಸಿರುವುದು ರಾಷ್ಟ್ರ ರಾಜಕೀಯದಲ್ಲಿ ಇದೇ ಮೊದಲು ಎಂದು ವಿಶ್ಲೇಷಿಸಲಾಗಿದೆ.
ಮಿಜೋರಾಂನ ಚಕ್ಮಾ ಬುಡಕಟ್ಟು ಮಂಡಳಿಯಲ್ಲಿ ಅಧಿಕಾರಕ್ಕಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಕೈಜೋಡಿಸಿವೆ. ಈ ಮೂಲಕ ಮಿಜೋ ನ್ಯಾಷನಲ್ ಫ್ಟಂಟ್(ಎಂಎನ್‍ಎಫ್)ನನ್ನು ಅಧಿಕಾರದಿಂದ ದೂರು ಇಡುವಲ್ಲಿ ಈ ಎರಡೂ ಪ್ರಮುಖ ಪಕ್ಷಗಳು ಯಶಸ್ವಿಯಾಗಿವೆ.
ಚುಕ್ಮಾ ಸ್ವಾಯತ್ತ ಜಿಲ್ಲಾ ಮಂಡಳಿಗೆ ನಡೆದ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಲಭಿಸಲಿಲ್ಲ. 20 ಸದಸ್ಯ ಬಲದ ಮಂಡಳಿಯಲ್ಲಿ ಕಾಂಗ್ರೆಸ್ ಕೇವಲ ಆರು ಸ್ಥಾನಗಳನ್ನಷ್ಟೇ ಗಳಿಸಲು ಶಕ್ತವಾಗಿತ್ತು. ಬಿಜೆಪಿ ಐದರಲ್ಲಿ ಜಯ ಸಾಧಿಸಿತ್ತು. ಈಶಾನ್ಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಅಂಗಪಕ್ಷವಾದ ಎಂಎನ್‍ಎಫ್ ಎಂಟು ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.
ಈ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಚುಕ್ಮಾ ಮಂಡಳಿಯಲ್ಲಿ ಬಿಜೆಪಿ ಮತ್ತು ಎಂಎನ್‍ಎಫ್ ಮೈತ್ರಿ ಅಧಿಕಾರಕ್ಕೆ ಬರಲಿದೆ ಎಂದು ಟ್ವೀಟ್ ಮಾಡಿದ್ದರು. ಇದೇ ವೇಳೆ ಕಾಂಗ್ರೆಸ್ ಮುಖಂಡರು ಚುನಾಯಿತ ಬಿಜೆಪಿ ಸದಸ್ಯರ ಮನವೊಲಿಸಿ ಮಂಡಳಿಯಲ್ಲಿ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಸಫಲರಾಗಿದ್ದಾರೆ.
ಕಾಂಗ್ರೆಸ್ ಆಡಳಿತ ಇರುವ ಮಿಜೋರಾಂನಲ್ಲಿ ಈ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದು ಈಶಾನ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ಕಟ್ಟಕಡೆಯ ರಾಜ್ಯ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ