ಲಂಚ ಪಡೆಯುವ ವೇಳೆ ಉಪ ನೋಂದಣಾಧಿಕಾರಿ ಎಸಿಬಿ ಬಲೆಗೆ!

ಕಡೂರು , ಏ.25- ಲಂಚ ಪಡೆಯುವ ವೇಳೆ ಉಪ ನೋಂದಣಾಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕಡೂರು ಸಬ್ ರಿಜಿಸ್ಟರ್ ಹೇಮೇಶ್ ಬಲೆಗೆ ಬಿದ್ದ ಅಧಿಕಾರಿ.
ಘಟನೆ ವಿವರ:ಬೀರೂರು ಪಟ್ಟಣದ ಚಂದ್ರಶೇಖರ್ ಇವರ ಅಕ್ಕ ಸೀತಮ್ಮ ಎಂಬುವರು ಕಿಡ್ನಿ ಸಮಸ್ಯೆಯಿಂದ ನರಳುತ್ತಿದ್ದು, ಅಂಗವಿಕಲೆಯಾಗಿದ್ದು ಎದ್ದು ಓಡಾಡುವ ಸ್ಥಿತಿಯಲ್ಲಿ ಇಲ್ಲ. ಇವರಿಗೆ ಬೀರೂರು ಪಟ್ಟಣದಲ್ಲಿ ನಾಲ್ಕು ನಿವೇಶನಗಳಿವೆ.
ಸೀತಮ್ಮನವರ ಒಂದು ನಿವೇಶನವನ್ನು ಮಾರಾಟ ಮಾಡಬೇಕಿದ್ದು, ಉಳಿದ ಮೂರು ನಿವೇಶನಗಳನ್ನು ತಮ್ಮಂದಿರ ಹೆಸರಿಗೆ ವರ್ಗಾವಣೆ ಮಾಡಿಸಬೇಕಿತ್ತು. ಇದಕ್ಕಾಗಿ ಸೀತಮ್ಮ ಅವರ ಬಳಿಯೇ ಹೋಗಿ ಸಹಿ ತೆಗೆದುಕೊಳ್ಳಬೇಕಿತ್ತು.
ಆದರೆ ಈ ಕೆಲಸ ಮಾಡಿಕೊಡಲು ಸಬ್ ರಿಜಿಸ್ಟರ್ ಅವರು 20 ಸಾವಿರ ಹಣದ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗಿದೆ.
ಮೊದಲ ಕಂತಾಗಿ 12 ಸಾವಿರ ರೂಗಳನ್ನು ಬ್ರೋಕರ್ ಪ್ರಸನ್ನ ಇವರ ಮೂಲಕ ಪಡೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಎಸಿಬಿ ಡಿವೈಎಸ್‍ಪಿ ನಾಗೇಶ್‍ಶೆಟ್ಟಿ ನೇತೃತ್ವದಲ್ಲಿ ದಾಳ ನಡೆಸಿ ಸಬ್‍ರಿಜಿಸ್ಟರ್ ಅವರನ್ನು ವಶಕ್ಕೆ ಪಡೆಯಲಾಯಿತು.
ಈ ಸಂಬಂಧವಾಗಿ ಸಬ್ ರಿಜಿಸ್ಟಾರ್ ಹೇಮೇಶ್, ಸರ್ಕಾರಿ ಅಧಿಕಾರಿಗೆ ಹಣ ಪಡೆಯಲು ಪ್ರೇರೇಪಣೆ ನೀಡುತ್ತಿದ್ದ ಆರೋಪದಲ್ಲಿ ಸ್ಟಾಂಪ್‍ವೆಂಡರ್ ಪ್ರಸನ್ನ, ಗಣಕಯಂತ್ರ ಸಿಬ್ಬಂದಿ ಸತೀಶ ಇವರುಗಳನ್ನು ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ನಾಗೇಶ್‍ಶೆಟ್ಟಿ ತಿಳಿಸಿದರು.
ಪೆÇಲೀಸ್ ಇನ್ಸ್‍ಪೆಕ್ಟರ್ ಕೃಷ್ಣಮೂರ್ತಿ, ಬ್ರೀಜೆಶ್ ಮ್ಯಾಥ್ಯೂ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆ ತೊಡಗಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ