ಬೆಂಗಳೂರು, ಏ.24- ಅಂತು ಇಂತು ಅಂಬರೀಶ್ ಕೊನೆಗೂ ಸ್ಪಷ್ಟನೆ ನೀಡಿದ್ದಾರೆ. ನನಗೆ ಆರೋಗ್ಯ ಸರಿ ಇಲ್ಲ, ಚುನಾವಣೆಗೆ ನಿಲ್ಲಲು ಸಾಧ್ಯವಿಲ್ಲ ಎಂದು ಅವರು ಕಡ್ಡಿ ತುಂಡಾದಂತೆ ಇಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಇತ್ತೀಚೆಗೆ ನನಗೆ ಓಡಾಡಲು ಆಗುತ್ತಿಲ್ಲ. ಹಾಗಾಗಿ ಚುನಾವಣೆಯಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ. ಮುಂದೆ ಯಾವುದೇ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದರು.
ನನಗೆ ಯಾವುದೇ ಬೇಸರವಿಲ್ಲ. ಕಳೆದ ಮೂರು ತಿಂಗಳಿಂದ ಬೇರೆ ಬೇರೆ ಪಕ್ಷದವರು ಕರೆಯುತ್ತಿದ್ದಾರೆ. ಆದರೆ, ನಾನು ಯಾವುದೇ ಪಕ್ಷಕ್ಕೆ ಹೋಗಿಲ್ಲ. ತಟಸ್ಥವಾಗಿದ್ದೇನೆ ಎಂದು ತಿಳಿಸಿದರು.
ನನಗೆ ಆಪ್ತರಾದವರಿಗೆ ಟಿಕೆಟ್ ಕೊಡಿ ಎಂದು ಕೇಳಿದರೆ ನಾನೇ ಮುಂದೆ ನಿಂತು ಅವರನ್ನು ಗೆಲ್ಲಿಸಬೇಕು. ಅದರ ಬದಲು ನಾನೇ ನಿಲ್ಲಬಹುದಲ್ಲವೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಮೊದಲೇ ಹೇಳಬಹುದಿತ್ತಲ್ಲವೆ? ಇಷ್ಟು ದಿವಸ ಸತಾಯಿಸಬೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅಂಬಿ, ಹೇಳಬಹುದಿತ್ತು. ವರುಣಾದಲ್ಲಿ ಏನಾಯ್ತು ನೋಡಿದಿರಲ್ಲ, ಮಂಡ್ಯ ಜನ ಸುಮ್ಮನಿರುತ್ತಿದ್ದರೆ? ಅದಕ್ಕಾಗಿಯೇ ನಾನು ಕೊನೆ ಕ್ಷಣದಲ್ಲಿ ತಿಳಿಸಿದ್ದೇನೆ. ಎಲ್ಲವನ್ನೂ ಯೋಚಿಸಿಯೇ ನಿರ್ಧರಿಸಿದ್ದೇನೆ ಎಂದು ಹೇಳಿದರು.
ಗಣಿಗ ರವಿ ಅವರಿಗೆ ಬಿ ಫಾರಂ ದೊರೆತಿದೆ. ನೀವು ಅವರಿಗೆ ಬೆಂಬಲ ನೀಡುತ್ತೀರ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾರೇ ನಿಂತರೂ ನಮ್ಮ ಬೆಂಬಲ ಇದೆ. ಅಂಬರೀಶ್ ಹೆಸರಲ್ಲೇ ಮಂಡ್ಯ ಎಂಎಲ್ಎ ಎಂದು ಇದೆ ಎಂದು ಮಾರ್ಮಿಕವಾಗಿ ಹೇಳಿದರು.
ಎಲ್ಲರ ಜತೆ ಪ್ರೀತಿ-ವಿಶ್ವಾಸ ಇದೆ. ಎಲ್ಲರೂ ನನ್ನೊಂದಿಗೆ ಚೆನ್ನಾಗಿದ್ದಾರೆ. ಎಲ್ಲರೂ ಮನೆಗೆ ಬರುತ್ತಿರುತ್ತಾರೆ. ಚುನಾವಣಾ ರಾಜಕೀಯದಿಂದ ಮಾತ್ರ ನಿವೃತ್ತಿಯಾಗುತ್ತೇನೆ. ಮುಂದೆ ಯಾವುದೇ ಚುನಾವಣೆಗೆ ನಿಲ್ಲುವುದಿಲ್ಲ. ಆಪ್ತರಿಗೆ ಟಿಕೆಟ್ ಕೊಡಿ ಎಂದು ನಾನು ಹೇಳಿಲ್ಲ. ಐದು ಟಿಕೆಟ್ ಕೊಡಿ ಎಂದು ಕೇಳಿದ್ದಾರೆ ಎಂದು ಹೇಳಿರುವುದು ಶುದ್ಧ ಸುಳ್ಳು. ನನಗೆ ವೋಟ್ ಹಾಕು ಅನ್ನುವುದಕ್ಕೂ, ಬೇರೆಯವರಿಗೆ ವೋಟ್ ಹಾಕಿ ಎಂದು ಹೇಳುವುದಕ್ಕೆ ಭಾರೀ ವ್ಯತ್ಯಾಸವಿದೆ ಎಂದರು.
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಲು ನಾನೂ ಕಾರಣ. ಅಂಬಿ ನಿಂಗ್ ವಯಸ್ಸಾಯ್ತೋ ಎಂಬ ಪಿಕ್ಚರ್ ತೆಗೆಯುತ್ತಿದ್ದಾರೆ. ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ಕಾರಣದಿಂದಲೇ ಮಂತ್ರಿ ಸ್ಥಾನದಿಂದ ತೆಗೆದಿದ್ದಾರೆ. ಈ ಎಲ್ಲದರಿಂದ ನನಗೆ ಯಾವುದೇ ಬೇಸರವಿಲ್ಲ. ಅಂಬಿಗೆ ಬೇಸರ ಆಗೋದೇ ಇಲ್ಲ. ನಾನು ಪ್ರಚಾರಕ್ಕೆ ಹೋಗಲು ಸಾಧ್ಯವಾಗುವುದಿಲ್ಲ ಎಂದು ರೆಬಲ್ ಹೇಳಿದರು.
ಕೇಂದ್ರ ರಾಜ್ಯ ಸಚಿವ ಸ್ಥಾನ ನೀಡಿದ್ದರು, ಮಂತ್ರಿಯಾಗಿದ್ದೆ, ಶಾಸಕನಾಗಿದ್ದೆ, ಎಲ್ಲವೂ ಆಗಿದ್ದೆ. ಬರಬರುತ್ತ ಶಕ್ತಿ ಕುಗ್ಗುತ್ತಿದೆ. ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ನವರು ಎಲ್ಲವನ್ನೂ ನೀಡಿದ್ದಾರೆ. ದ್ರೋಹ ಮಾಡಿಲ್ಲ ಎಂದು ಹೇಳಿದರು.