ಮತದಾರರೇ ಅಭ್ಯರ್ಥಿಯೊಬ್ಬರಿಗೆ ಚುನಾವಣಾ ವೆಚ್ಚಕ್ಕೆ ದೇಣಿಗೆ ಸಂಗ್ರಹಿಸಿ ಕೊಟ್ಟ ಕುತೂಹಲಕಾರಿ ಪ್ರಸಂಗ:

ತಿ.ನರಸೀಪುರ, ಏ.23- ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಅಭ್ಯರ್ಥಿಯ ಜೇಬು ಭರ್ತಿ ಇದ್ದರೆ ಮಾತ್ರ ಆತನ ಹಿಂದೆ ಕಾರ್ಯಕರ್ತರು ಇರುತ್ತಾರೆಂಬ ಪರಿಸ್ಥಿತಿ ಇರುವ ಈ ಸಂಧರ್ಭದಲ್ಲಿ ಮತದಾರರೇ ಅಭ್ಯರ್ಥಿಯೊಬ್ಬರಿಗೆ ಚುನಾವಣಾ ವೆಚ್ಚಕ್ಕೆ ದೇಣಿಗೆ ಸಂಗ್ರಹಿಸಿ ಕೊಟ್ಟ ಕುತೂಹಲಕಾರಿ ಪ್ರಸಂಗ ನಡೆದಿದೆ.
ತಿ.ನರಸೀಪುರ ಮೀಸಲು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಅಶ್ವಿನ್ ಕುಮಾರ್ ಮತದಾರರರಿಂದಲೇ ದೇಣಿಗೆ ಪಡೆದ ಅದೃಷ್ಟವಂತ ಅಭ್ಯರ್ಥಿ.
ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದ ಅಶ್ವಿನ್ ರಾತ್ರಿ 8ರ ಸುಮಾರಿಗೆ ಬನ್ನೂರು ಹೋಬಳಿಯ ಬಸವನ ಹಳ್ಳಿ ಗ್ರಾಮಕ್ಕೆ ಆಗಮಿಸಿದರು.
ಗ್ರಾಮದಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಡೋಲು ವಾದ್ಯಗಳೊಂದಿಗೆ ಅವರನ್ನು ಬರಮಾಡಿಕೊಂಡರು. ಅಲ್ಲಿಯೇ ಪುಟ್ಟದೊಂದು ಕಾರ್ಯಕ್ರಮ ಆಯೋಜಿಸಿದ ಗ್ರಾಮಸ್ಥರು ಸಂಗ್ರಹಿಸಿದ್ದ 3 ಲಕ್ಷ ರೂ.ಗಳನ್ನು ಅಶ್ವಿನ್‍ರಿಗೆ ನೀಡಿ ಚುನಾವಣೆಯ ವೆಚ್ಚಕ್ಕೆ ಉಪಯೋಗಿಸಿಕೊಂಡು ಗೆದ್ದು ಬರುವಂತೆ ಹರಸಿದರು.
ಅನಿರೀಕ್ಷಿತ ಬೆಳವಣಿಗೆಯಿಂದ ಭಾವುಕರಾದ ಅಭ್ಯರ್ಥಿ ಕ್ಷೇತ್ರದ ಮತದಾರರು ನನ್ನ ಮೇಲಿಟ್ಟಿರುವ ಅಭಿಮಾನಕ್ಕೆ ಋಣಿಯಾಗಿದ್ದು ದುಡ್ಡು ಕೊಟ್ಟು ಓಟು ನೀಡುವ ನಿಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುವುದಾಗಿ ಭರವಸೆ ನೀಡಿದರು. ಹಣಕ್ಕಾಗಿಯೇ ಕಾರ್ಯಕರ್ತರು, ಮತದಾರರು ಅಭ್ಯರ್ಥಿಗಳ ಹಿಂದೆ ಓಡಾಡುವ ಪ್ರಸಕ್ತ ಪರಿಸ್ಥಿತಿಯಲ್ಲಿ ಬಸವನಹಳ್ಳಿ ಗ್ರಾಮಸ್ಥರು ದೇಣಿಗೆ ಸಂಗ್ರಹಿಸಿಕೊಡುವ ಮೂಲಕ ಮಾದರಿಯಾದರು.
ಸಚಿವ ಡಾ.ಎಚ್.ಸಿ.ಮಹದೇವಪ್ಪರವರು ಮೊದಲ ಭಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭ ಜನರೇ ದೇಣಿಗೆ ಸಂಗ್ರಹಿಸಿ ಕೊಟ್ಟಿದ್ದನ್ನಿಲ್ಲಿ ಸ್ಮರಿಸಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ