35ಕ್ಕೂ ಹೆಚ್ಚು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯಿಂದ ಕಾಂಗ್ರೆಸ್‍ನಲ್ಲಿ ತೀವ್ರ ಗೊಂದಲ

ಬೆಂಗಳೂರು, ಏ.23- ಟಿಕೆಟ್ ಹಂಚಿಕೆಯಲ್ಲಿನ ಕಗ್ಗಂಟು, ರಾಜ್ಯ ನಾಯಕರ ಪ್ರತಿಷ್ಠೆ ಹಾಗೂ ಕೆಲವು ಆಕಾಂಕ್ಷಿಗಳ ಮೊಂಡುತನದಿಂದಾಗಿ ಸುಮಾರು 35ಕ್ಕೂ ಹೆಚ್ಚು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯಿಂದ ಕಾಂಗ್ರೆಸ್‍ನಲ್ಲಿ ತೀವ್ರ ಗೊಂದಲ ಉಂಟಾಗಿದೆ.
ಟಿಕೆಟ್ ಹಂಚಿಕೆಯಲ್ಲಿ ಆದ ಗೊಂದಲಗಳನ್ನು ಸರಿಪಡಿಸಲು ನಿನ್ನೆ ಎರಡನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ 11 ಕ್ಷೇತ್ರಗಳ ಪಟ್ಟಿಯನ್ನು ಪ್ರಕಟಿಸಿದ ಕಾಂಗ್ರೆಸ್ ಅದರಲ್ಲಿ 6 ಕ್ಷೇತ್ರಗಳ ಅಭ್ಯರ್ಥಿಗಳನ್ನು ಬದಲಾವಣೆ ಮಾಡಿದೆ.

ಟಿಕೆಟ್ ಹಂಚಿಕೆ ವಿಷಯದಲ್ಲಿ ಈ ಬಾರಿ ಹೆಚ್ಚು ಗದ್ದಲಗಳು ಕಂಡು ಬರದೇ ಇದ್ದರೂ ಕಾಂಗ್ರೆಸ್‍ನ ಆಂತರ್ಯದಲ್ಲಿ ಬೇಗುದಿ ಎಂಬುದು ಬೂದಿ ಮುಚ್ಚಿದ ಕೆಂಡದಂತಿದೆ.
ಕಳೆದ ವರ್ಷದಂತೆ ಅದು ಸ್ಫೋಟಿಸದೆ ಇದ್ದರೂ ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕೆ ತೀವ್ರ ಹಾನಿ ಮಾಡಲಿದೆ ಎಂಬ ಲೆಕ್ಕಾಚಾರ ನಾಯಕರನ್ನು ಕಾಡಲಾರಂಭಿಸಿದೆ.
ಹೀಗಾಗಿ ಅತೃಪ್ತರ ಮನವೊಲಿಸಲು ಇನ್ನಿಲ್ಲದ ಕಸರತ್ತು ನಡೆಯುತ್ತಿದೆ. ಕೆಲವು ಕ್ಷೇತ್ರಗಳಿಗೆ ಟಿಕೆಟ್ ನೀಡುವಾಗ ಕಾರ್ಯಕರ್ತರ, ಮುಖಂಡರ ಅಭಿಪ್ರಾಯ ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಜಗಳೂರು ಕ್ಷೇತ್ರಕ್ಕೆ ಎ.ಎಲ್.ಪುಷ್ಪ ಅವರಿಗೆ ಟಿಕೆಟ್ ನೀಡಿ, ನಿನ್ನೆ ಅದನ್ನು ಏಕಾಏಕಿ ಹಿಂಪಡೆಯಲಾಗಿದೆ. ತಿಪಟೂರು ಕ್ಷೇತ್ರಕ್ಕೆ ನಂಜಾಮರಿಗೆ ಟಿಕೆಟ್ ನೀಡಿ ಕೊನೆಗೆ ಷಡಕ್ಷರಿ ಅವರಿಗೆ ಬಿ ಫಾರಂ ನೀಡಲಾಗಿದೆ.

ಮಡಿಕೇರಿ ಕ್ಷೇತ್ರದಲ್ಲಿ ಚಂದ್ರಮೌಳಿಗೆ ಟಿಕೆಟ್ ನೀಡಿ ವಾಪಸ್ ಪಡೆದು, ಚಂದ್ರಕಲಾ ಅವರಿಗೆ ಟಿಕೆಟ್ ನೀಡಲಾಗಿದೆ. ಪದ್ಮನಾಭನಗರದಲ್ಲೂ ಗೊಂದಲ ಉಂಟಾಗಿ ಗುರುಪ್ಪ ನಾಯ್ಡು ಅವರಿಂದ ಟಿಕೆಟ್‍ನ್ನು ವಾಪಸ್ ಪಡೆದು ಎಂ.ಶ್ರೀನಿವಾಸ್ ಅವರಿಗೆ ನೀಡಲಾಗಿದೆ.
ಇದು ಒಂದು ಹಂತದ ಗೊಂದಲವಾದರೆ ಕೆಲವು ಕ್ಷೇತ್ರಗಳಲ್ಲಿ ತಮ್ಮ ಬೆಂಬಲಿಗರಿಗೆ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್‍ನ ಪ್ರಮುಖ ನಾಯಕರುಗಳೇ ಅಧಿಕೃತ ಅಭ್ಯರ್ಥಿಯ ಸೋಲಿಗೆ ವ್ಯೂಹ ರಚಿಸಿದ್ದಾರೆ.

ಕೋಲಾಹಲ ಬೇಗುದಿಗೆ ಮಂಗಳೂರು, ಉತ್ತರ ಕನ್ನಡ, ಬಿಜಾಪುರ, ಬೆಂಗಳೂರು ಜಿಲ್ಲೆಗಳಲ್ಲಿ ಪ್ರಭಾವಿ ನಾಯಕರುಗಳೇ ಕಾಂಗ್ರೆಸ್‍ನ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

ಜಗಳೂರಿನಲ್ಲಿ ಹಾಲಿ ಶಾಸಕರಾದ ರಾಜೇಶ್ ಅವರಿಗೆ ಟಿಕೆಟ್ ತಪ್ಪಿಸಿದ ಪ್ರಭಾವಿ ನಾಯಕರು ಪುಷ್ಪ ಅವರನ್ನು ಕಣಕ್ಕಿಳಿಸುವ ಪ್ರಯತ್ನ ನಡೆಸಿದ್ದರು. ಆದರೂ ಕೊನೆ ಹಂತದಲ್ಲಿ ಹೈಕಮಾಂಡ್ ರಾಜೇಶ್ ಅವರಿಗೆ ಟಿಕೆಟ್ ನೀಡಿದೆ. ಹೀಗಾಗಿ ಹಿರಿಯ ನಾಯಕರು ಪುಷ್ಪ ಅವರ ಬೆಂಬಲಕ್ಕೆ ನಿಂತಿದ್ದಾರೆ ಎನ್ನಲಾಗಿದೆ.

ಮಾಯಕೊಂಡ ಕ್ಷೇತ್ರದಲ್ಲಿ ಟಿಕೆಟ್ ವಂಚಿತ ಹಾಲಿ ಶಾಸಕ ಶಿವಮೂರ್ತಿ ನಾಯಕ್ ಪಕ್ಷದ ಅಭ್ಯರ್ಥಿ ಬಸವರಾಜು ಅವರನ್ನು ಶತಾಯ ಗತಾಯ ಸೋಲಿಸಲೇಬೇಕು ಎಂದು ಕಾರ್ಯತಂತ್ರ ರೂಪಿಸಿದ್ದಾರೆ.
ಬೆಂಗಳೂರಿನ ಪದ್ಮನಾಭನಗರದಲ್ಲಿ ಗುರುಪ್ಪ ನಾಯ್ಡು ಕೈಗೆ ಬಂದ ತುತ್ತನ್ನು ಕಳೆದುಕೊಂಡಿದ್ದು, ಹಿರಿಯ ನಾಯಕರು ಎಷ್ಟೇ ಮನವೊಲಿಸಿದರು ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

ಮಹಾಲಕ್ಷ್ಮಿಲೇಔಟ್‍ನಲ್ಲೂ ಅದೇ ರೀತಿಯ ಅಸಮಾಧಾನವಿದ್ದು , ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡದ ಕಾರಣಕ್ಕಾಗಿ ಪ್ರಭಾವಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಸವನಗುಡಿ, ರಾಜಾಜಿನಗರ ಕ್ಷೇತ್ರ, ಸಿ.ವಿ.ರಾಮನ್‍ನಗರ, ಪುಲಿಕೇಶಿನಗರಗಳಲ್ಲೂ ಅಸಮಾಧಾನದ ಹೊಗೆಯಾಡುತ್ತಿದ್ದು, ಕಾಂಗ್ರೆಸ್‍ನ ನಾಯಕರೇ ಈಗ ಪಕ್ಷದಲ್ಲಿರುವ ಅಭ್ಯರ್ಥಿಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಮಂಡ್ಯದಲ್ಲಂತೂ ಬಗೆಹರಿಯದಷ್ಟು ಗೊಂದಲಗಳು ತಲೆದೋರಿವೆ. ಅಂಬರೀಶ್ ಸ್ಪರ್ಧೆ ಅನಿಶ್ಚಿತತೆ, ಶ್ರೀರಂಗಪಟ್ಟಣದಲ್ಲಿ ರಮೇಶ್ ಬಂಡಿ ಸಿದ್ದೇಗೌಡ ವಿರುದ್ಧ ಕೆಲವರು ಬಂಡಾಯದ ಕಹಳೆ ಊದಿದ್ದಾರೆ. ಮೇಲುಕೋಟೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಇರುವ ಬಗ್ಗೆ ಆಕ್ಷೇಪ ಕೇಳಿಬಂದಿವೆ.
ಅವಿಭಜಿತ ಬಿಜಾಪುರ, ಬಾಗಲಕೋಟೆ ಜಿಲ್ಲೆಯಲ್ಲೂ ಹಿರಿಯ ನಾಯಕರ ವಿರುದ್ಧ 2ನೇ ಹಂತದ ಮುಖಂಡರು ತಿರುಗಿಬಿದ್ದಿದ್ದಾರೆ.

ಸಿಂಧಗಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಂಜುಳಾ ಗೋವರ್ಧನ್ ಅವರು ಬಂಡಾಯದ ಕಹಳೆ ಮೊಳಗಿಸಿದ್ದಾರೆ. ಕರಾವಳಿ ಭಾಗದಲ್ಲಿ ಕಾರ್ಕಳ, ಕಾರವಾರ ಸೇರಿದಂತೆ ಎರಡುಮೂರು ಕ್ಷೇತ್ರಗಳಲ್ಲಿ ಬಂಡಾಯದ ವಾತಾವರಣ ಇದೆ.

ಅದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ಮಾಜಿ ಶಾಸಕ ಆಂಜನಮೂರ್ತಿ ತಿರುಗಿಬಿದ್ದಿದ್ದು, ದೇವನಹಳ್ಳಿಯಲ್ಲಿ ಟಿಕೆಟ್ ಸಿಗದೆ ಇದಿದ್ದರಿಂದ ಛಲವಾದಿ ನಾರಾಯಣಸ್ವಾಮಿ ಬಿಜೆಪಿ ಸೇರಿ ಕಾಂಗ್ರೆಸ್ ಸೋಲಿಸಲು ಪಣ ತೊಟ್ಟಿದ್ದಾರೆ.

ತುಮಕೂರು ಗ್ರಾಮಾಂತರ ತಿಪಟೂರಿನಲ್ಲಿ ಅಸಮಾಧಾನದ ಹೊಗೆಯಾಡುತ್ತಿದ್ದು, ಕೋಲಾರ ಜಿಲ್ಲೆಯ ಕೆಜಿಎಫ್, ಬಾಗೇಪಲ್ಲಿ ಕೋಲಾರ ನಗರದಲ್ಲಿ ಅತೃಪ್ತಿ ಮನೆಮಾಡಿದೆ.
ನಾಳೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಈವರೆಗೆ ಸುಮಾರು 80 ಕ್ಕೂ ಹೆಚ್ಚು ಕಾಂಗ್ರೆಸ್ ಬಂಡಾಯಗಾರರು ನಾಮಪತ್ರ ಸಲ್ಲಿಸಿದ್ದಾರೆ.

ನಾಳೆ ನಾಮಪತ್ರ ಸಲ್ಲಿಕೆಯ ಕೊನೆಯ ಅವಧಿ ಮುಗಿದ ಬಳಿಕ ಅತೃಪ್ತರ ಮನವೊಲಿಕೆಗೆ ಹಿರಿಯ ನಾಯಕರು ಕಸರತ್ತು ನಡೆಸಲಿದ್ದಾರೆ. ಒಂದು ವೇಳೆ ವರಿಷ್ಠರ ಮಾತಿಗೆ ಬೆಲೆ ಕೊಟ್ಟು ಬಂಡಾಯ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದರೂ, ಈಗಾಗಲೇ ಹಾದಿರಂಪ ಬೀದಿರಂಪದಿಂದ ಪಕ್ಷದ ವರ್ಚಸ್ಸಿಗೆ ಆಗಿರುವ ಹಾನಿಯನ್ನು ಸರಿಪಡಿಸುವುದು ಕಷ್ಟವಾಗಿದೆ.

ಇದು ಚುನಾವಣೆ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬ ಆತಂಕದ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಬುಧವಾರ ಬೆಳಗ್ಗೆ ಪಕ್ಷದ ಹಿರಿಯ ನಾಯಕರು ಸಭೆ ಸೇರಿ ಸಮಾಲೋಚನೆ ನಡೆಸಿ ಡ್ಯಾಮೇಜ್ ಕಂಟ್ರೋಲ್ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ಹೇಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ