ಮುಗಿಯದ ಬಂಡಾಯ: ಪಕ್ಷಗಳಲ್ಲಿ ಮುಂದುವರೆದ ಅಭ್ಯರ್ಥಿಗಳ ಆಯ್ಕೆ ಗೊಂದಲ; ಭಿನ್ನಮತೀಯರ ಮನವೊಲಿಕೆಗೆ ಕೊನೆ ಕ್ಷಣದ ಕಸರತ್ತು

 

ಬೆಂಗಳೂರು, ಏ.23-ಮುಗಿಯದ ಬಂಡಾಯ ರಗಳೆ, ರಾಜಕೀಯ ಪಕ್ಷಗಳಲ್ಲಿ ಮುಂದುವರೆದ ಅಭ್ಯರ್ಥಿಗಳ ಆಯ್ಕೆ ಗೊಂದಲ, ಭಿನ್ನಮತೀಯರನ್ನು ಮನವೊಲಿಸುವ ಕೊನೆ ಕ್ಷಣದ ಕಸರತ್ತುಗಳ ನಡುವೆಯೇ ಇಂದು ಅನೇಕ ಘಟಾನುಘಟಿಗಳು ನಾಮಪತ್ರ ಸಲ್ಲಿಸಿದರು.

ನಾಳೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದರೂ ಹಲವು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಗೊಂದಲ ಮುಗಿದಿಲ್ಲ. ಕಾಂಗ್ರೆಸ್ 224 ಕ್ಷೇತ್ರಗಳಿಗೂ ಅಭ್ಯರ್ಥಿಗಳ ಆಯ್ಕೆ ಘೋಷಿಸಿದೆ.
ಬಿಜೆಪಿ ಇನ್ನು 11 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಬಾಕಿ ಉಳಿಸಿಕೊಂಡಿದೆ. ಜೆಡಿಎಸ್ ಸಂಪೂರ್ಣ ಪ್ರಮಾಣದ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಈ ನಡುವೆ ಹಲವು ಕ್ಷೇತ್ರಗಳಲ್ಲಿ ದಿಗ್ಗಜರು ನಾಮಪತ್ರ ಸಲ್ಲಿಸಿದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಕೊರಟಗೆರೆ ಕ್ಷೇತ್ರದಿಂದ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಇದಕ್ಕೂ ಮುನ್ನ ತನ್ನ ತಂದೆ-ತಾಯಿ ಸಮಾಧಿ ಬಳಿ ಪುಷ್ಪ ನಮನ ಸಲ್ಲಿಸಿದರು.
ಮೆಡಿಕಲ್ ಕಾಲೇಜ್ ಅತಿಥಿ ಗೃಹದಲ್ಲಿ ಸೋದರರ ಆಶೀರ್ವಾದ ಪಡೆದು, ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಕ್ಯಾಮೇನಹಳ್ಳಿ ಆಂಜನೇಯ ದೇಗುಲ, ಕೊರಟಗೆರೆ ಕಟ್ಟೆ ಗಣಪತಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಕಳೆದ ಬಾರಿ ಈ ಕ್ಷೇತ್ರದಿಂದ ಸೋಲನನುಭವಿಸಿ ಎಚ್ಚೆತ್ತಿರುವ ಪರಮೇಶ್ವರ್ ಈಗ ಸಕ್ರಿಯ ಪ್ರಚಾರದಲ್ಲಿ ತೊಡಗಿದ್ದಾರೆ. ತಮ್ಮ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿ ತಮಗೆ ಬೆಂಬಲ ನೀಡಿ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಸಹಕರಿಸಬೇಕೆಂದು ಮನವಿ ಮಾಡಿದರು.

ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್‍ಶೆಟ್ಟರ್, ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ತಮ್ಮ ಅಪಾರ ಬೆಂಬಲಿಗರೊಂದಿಗೆ ತೆರಳಿ ತಮ್ಮ ಉಮೇದುವಾರಿಕೆ ಸಲ್ಲಿಸಿದ ಅವರು, ಇದಕ್ಕೂ ಮುನ್ನ ಕುಟುಂಬದವರೊಂದಿಗೆ ತೆರಳಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.

ಕಲಬುರಗಿ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತರಾಗಿ ಜೆಡಿಎಸ್ ಸೇರ್ಪಡೆಯಾದ ರೇವೂ ನಾಯಕ್ ಬೆಳಮಗಿ ಅವರು ಇಂದು ಜೆಡಿಎಸ್‍ನಿಂದ ನಾಮಪತ್ರ ಸಲ್ಲಿಸಿದರು.
ಭಾರೀ ಸಂಖ್ಯೆಯಲ್ಲಿ ಮೆರವಣಿಗೆ ಮೂಲಕ ಸಾಗಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು.
ಬಸವಕಲ್ಯಾಣದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪಿ.ಜಿ.ಆರ್.ಸಿಂಧ್ಯಾ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅಪಾರ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಭಾರೀ ಮೆರವಣಿಗೆಯಲ್ಲಿ ತೆರಳಿ ಉಮೇದುವಾರಿಕೆ ಸಲ್ಲಿಸಿದರು.
ಮೈಸೂರು ಕೃಷ್ಣರಾಜ ಕ್ಷೇತ್ರದ ಹಾಲಿ ಶಾಸಕ ಎಂ.ಕೆ.ಸೋಮಶೇಖರ್ ಅವರು ಚಾಮುಂಡಿ ವನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ತೆರಳಿ ಮಹಾನಗರ ಪಾಲಿಕೆಯಲ್ಲಿ ನಾಮಪತ್ರ ಸಲ್ಲಿಸಿದರು.

ಚಾಮರಾಜ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪೆÇ್ರ.ಕೆ.ಎಸ್.ರಂಗಪ್ಪ ಅವರು ದಿವಾನ್ ರಸ್ತೆಯ ಅಮೃತೇಶ್ವರ ದೇವಾಲಯಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರೆ, ಇದೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೂಡಾ ಮಾಜಿ ಅಧ್ಯಕ್ಷ ನಾಗೇಂದ್ರ ಅವರು ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಪೂಜೆ ಸಲ್ಲಿಸಿ ನಂತರ ನಾಮಪತ್ರ ಸಲ್ಲಿಸಿದರು.
ಎನ್.ಆರ್.ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸಂದೇಶ್‍ಸ್ವಾಮಿ ಅವರು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಾಮಪತ್ರ ಸಲ್ಲಿಸಿದರು.
ಸಚಿವ ತನ್ವೀರ್‍ಸೇಠ್ ಅವರು ಚಾಮುಂಡಿ ವಿಹಾರ ಕ್ರೀಡಾಂಗಣಕ್ಕೆ ಮೆರವಣಿಗೆ ಮೂಲಕ ಬಂದು ನಾಮಪತ್ರ ಸಲ್ಲಿಸಿದರು.

ಎಂಇಪಿ ಅಭ್ಯರ್ಥಿ ಮಂಗಳಗೌರಿ ಅವರು ಚಾಮುಂಡಿ ವಿಹಾರ ಕ್ರೀಡಾಂಗಣಕ್ಕೆ ಮೆರವಣಿಗೆಯಲ್ಲಿ ಸಾಗಿ ಬಂದು ನಾಮಪತ್ರ ಸಲ್ಲಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮಗ ವಿಜಯೇಂದ್ರ ಅವರು ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಇಂದು ನಾಮಪತ್ರವನ್ನು ನಂಜನಗೂಡಿನಲ್ಲಿ ಸಲ್ಲಿಸಿದರು.
ಕೃಷ್ಣರಾಜ ನಗರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸಾ.ರಾ.ಮಹೇಶ್ ಅವರು ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ಸಾಗರ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಹಿರಿಯ ಮುಖಂಡ, ಸಚಿವ ಕಾಗೋಡು ತಿಮ್ಮಪ್ಪ ನಾಮಪತ್ರ ಸಲ್ಲಿಸಿದರು. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಬೇಳೂರು ಗೋಪಾಲಕೃಷ್ಣ ಇವರಿಗೆ ಸಾಥ್ ನೀಡಿದರು.
ಸರ್ವಜ್ಞ ನಗರ ಜೆಡಿಎಸ್ ಅಭ್ಯರ್ಥಿಯಾದ ಡಾ.ಅನ್ವರ್ ಶರೀಫ್, ರಾಜಾಜಿನಗರದ ಎಚ್.ಎಂ.ಕೃಷ್ಣಮೂರ್ತಿ, ಸಿ.ವಿ.ರಾಮನ್‍ನಗರದಿಂದ ಪಿ.ರಮೇಶ್, ಬ್ಯಾಟರಾಯನಪುರದಿಂದ ಪಿ.ಬಿ.ಚಂದ್ರು ನಾಮಪತ್ರ ಸಲ್ಲಿಸಿದರು.

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಿಂದ ಡಾ.ಸಿ.ಎಸ್.ಅಶ್ವತ್ಥನಾರಾಯಣ್ ಅವರು ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸಾಥ್ ನೀಡಿದರು.
ಗಾಂಧಿನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಯುವ ಮುಖಂಡ ರಾಮಚಂದ್ರಗೌಡರ ಪುತ್ರ ಸಪ್ತಗಿರಿ ಗೌಡ ಅವರು ನಾಮಪತ್ರ ಸಲ್ಲಿಸಿದರು. ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಪಿ.ಸಿ.ಮೋಹನ್ ಮತ್ತಿತರರು ಉಪಸ್ಥಿತರಿದ್ದರು. ಚಿಕ್ಕಲಾಲ್‍ಬಾಗ್ ತುಳಸಿ ತೋಟದಿಂದ ತಮ್ಮ ಅಭಿಮಾನಿಗಳೊಂದಿಗೆ ಪಾದಯಾತ್ರೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದ್ದು, ವಿಶೇಷವಾಗಿತ್ತು.

ಚಾಮರಾಜಪೇಟೆಯ ಬಿಜೆಪಿ ಅಭ್ಯರ್ಥಿ ಎಂ.ಲಕ್ಷ್ಮಿನಾರಾಯಣ್ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಮಹದೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.

ವಿಜಯನಗರದ ಬಿಜೆಪಿ ಅಭ್ಯರ್ಥಿ ಎಚ್.ರವೀಂದ್ರ, ಕೇಂದ್ರ ಸಚಿವ ಅನಂತ್‍ಕುಮಾರ್ ಅವರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಚೋಳೂರು ಪಾಳ್ಯದ ಬನಶಂಕರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ ಸಾಗಿ ಉಮೇದುವಾರಿಕೆ ಸಲ್ಲಿಸಿದರು.
ಕಾಂಗ್ರೆಸ್, ಜೆಡಿಎಸ್, ಬಿಜೆಪಿಯಲ್ಲದೆ, ಎಂಇಪಿ, ಜೆಡಿಯು, ಆಮ್ ಆದ್ಮಿ, ಪಕ್ಷೇತರರು ಸೇರಿದಂತೆ ಅನೇಕರು ನಾಮಪತ್ರ ಸಲ್ಲಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ