ನವದೆಹಲಿ, ಏ.20-ಮಹಿಳೆಯರ ಮೇಲಿನ ಅಪರಾಧ ಮತ್ತು ದೌರ್ಜನ್ಯ ಪ್ರಕರಣಗಳಲ್ಲಿ ಕನಿಷ್ಠ 48 ಸಂಸದರು ಮತ್ತು ಶಾಸಕರು ಶಾಮೀಲಾಗಿದ್ದಾರೆ. ಈ ಸಂಗತಿಯನ್ನು ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾಮ್ರ್ಸ್(ಎಡಿಆರ್) ಸಂಸ್ಥೆ ತಿಳಿಸಿದೆ.
ದೇಶದ ವಿವಿಧ ರಾಜ್ಯಗಳ ಒಟ್ಟು 1,580(ಶೇ.33) ಸಂಸದರು ಮತ್ತು ಶಾಸಕರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದು ಘೋಷಿಸಿದ್ದು, ಇವರಲ್ಲಿ 45 ಶಾಸಕರು ಮತ್ತು ಮೂವರು ಸಂಸದರು ಮಹಿಳೆಯರು ಮೇಲಿನ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಸಂಗತಿ ಬೆಳಕಿಗೆ ಬಂದಿದೆ.
ಅಧಿಕಾರದಲ್ಲಿರುವ ಶಾಸಕರು ಮತ್ತು ಸಂಸದರು ಸಲ್ಲಿಸಿರುವ 4,896 ಅಫಿಡವಿಟ್ಗಳಲ್ಲಿ, 4,845 ಪ್ರಮಾಣಪತ್ರಗಳನ್ನು ಎಡಿಆರ್ ವಿಶ್ಲೇಷಿಸಿದೆ.
ಉತ್ತರಪ್ರದೇಶದ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಶಾಮೀಲಾಗಿರುವ ಉನ್ನಾವೋ ಅತ್ಯಾಚಾರ ಹಾಗೂ ಜಮ್ಮು ಮತ್ತು ಕಾಶ್ಮೀರದ ಕತುವಾ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕಗ್ಗೊಲೆ ಪ್ರಕರಣಗಳು ದೇಶಾದ್ಯಂತ ವ್ಯಾಪಕ ಆಕ್ರೋಶದ ಮಧ್ಯೆ ಈ ವರದಿ ಪ್ರಕಟವಾಗಿದೆ.
ಎಂಪಿ ಮತ್ತು ಎಂಎಎಲ್ಗಳು ಅತ್ಯಾಚಾರ ಉದ್ದೇಶದಿಂದ ಮಹಿಳೆಯರ ಮೇಲೆ ಹಲ್ಲೆ, ಅಪಹರಣ, ಲೈಂಗಿಕ ಕಿರುಕುಳ. ವಿವಾಹಕ್ಕೆ ಬಲವಂತ, ರೇಪ್. ಕೌಟುಂಬಿಕ ಹಿಂಸೆ ಮತ್ತು ಕಳ್ಳಸಾಗಣೆಗೆ ಸಂಬಂಧಪಟ್ಟ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.
ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳಲ್ಲಿ ಬಿಜೆಪಿ ಶಾಸಕರದ್ದೇ ಗರಿಷ್ಠ ಸಂಖ್ಯೆ(12). ನಂತರದ ಸ್ಥಾನದಲ್ಲಿ ಶಿವಸೇನಾ(7) ಮತ್ತು ತೃಣಮೂಲ ಕಾಂಗ್ರೆಸ್(6) ಪಕ್ಷಗಳಿವೆ.