ಎನ್.ಆರ್.ರಮೇಶ್ Àರನ್ನು ಸಮಾಧಾನ ಪಡಿಸುವಲ್ಲಿ ಯಶಸ್ವಿಯಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಏ.20-ಬಿಜೆಪಿ ಟಿಕೆಟ್ ಸಿಗದೆ ಮುನಿಸಿಕೊಂಡಿದ್ದ ಬಿಬಿಎಂಪಿ ಮಾಜಿ ಸದಸ್ಯ ಎನ್.ಆರ್.ರಮೇಶ್ ಅವರನ್ನು ಸಮಾಧಾನ ಪಡಿಸುವಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.

ಟಿಕೆಟ್ ಸಿಗದೆ ಹಿನ್ನೆಲೆಯಲ್ಲಿ ಪಕ್ಷೇತರ ಸದಸ್ಯನಾಗಿ ಕಣಕ್ಕಿಳಿಯುವ ಹೇಳಿಕೆ ನೀಡಿದ್ದ ಎನ್.ಆರ್.ರಮೇಶ್ ಅವರನ್ನು ಕರೆಸಿಕೊಂಡು ಯಡಿಯೂರಪ್ಪ ಮುಂದಿನ ದಿನಗಳಲ್ಲಿ ನಿಮಗಾಗಿರುವ ಅನ್ಯಾಯವನ್ನು ಸರಿಪಡಿಸುತ್ತೇವೆ ಎಂಬ ಭರವಸೆ ನೀಡಿರುವುದರಿಂದ ರಮೇಶ್ ಪಕ್ಷೇತರವಾಗಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ.

ಯಡಿಯೂರಪ್ಪ ಅವರ ಸಂಧಾನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎನ್.ಆರ್.ರಮೇಶ್, ಬಿಜೆಪಿ ರಾಜ್ಯಾಧ್ಯಕ್ಷರಾದ ಯಡಿಯೂರಪ್ಪನವರು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವುದಿಲ್ಲ. ಬಿಜೆಪಿ ಪರವಾಗಿ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಗಾಂಧಿನಗರ ಅಥವಾ ಚಾಮರಾಜಪೇಟೆಯಲ್ಲಿ ಸ್ಪರ್ಧಿಸುವಂತೆ ನನಗೆ ಅವರು ತಿಳಿಸಿದ್ದರು. ಆದರೆ ಚಾಮರಾಜಪೇಟೆ ಕ್ಷೇತ್ರ ನನಗೆ ಆಗಿಬರುವುದಿಲ್ಲ. ಗಾಂಧಿನಗರದಲ್ಲಿ ಸಪ್ತಗಿರಿ ಗೌಡ ಹಾಗೂ ಎ.ಎಲ್.ಶಿವಕುಮಾರ್ ಆಕಾಂಕ್ಷಿಗಳಾಗಿದ್ದಾರೆ. ಅವರಿಗೆ ಅನ್ಯಾಯ ಮಾಡಲು ಮನಸ್ಸು ಬರುವುದಿಲ್ಲ. ಹೀಗಾಗಿ ನಿಷ್ಠಾವಂತ ಕಾರ್ಯಕರ್ತನಾಗಿ ಮುಂದುವರೆಯಲು ತೀರ್ಮಾನಿಸಿದ್ದೇನೆ. ಮುಂದೆ ಏನು ಮಾಡಬೇಕೆಂಬ ಬಗ್ಗೆ ನಾಳೆ ಕಾರ್ಯಕರ್ತರ ಸಭೆಯಲ್ಲಿ ಸಮಾಲೋಚನೆ ನಡೆಸಿ ತೀರ್ಮಾನಿಸುತ್ತೇನೆ ಎಂದರು.

ಬಿ.ವಿ.ಗಣೇಶ್ ಬಂಡಾಯ:
ಎನ್.ಆರ್.ರಮೇಶ್ ಅವರ ಮನವೊಲಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿರುವ ಬೆನ್ನಲ್ಲೇ ಚಾಮರಾಜಪೇಟೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿ.ವಿ.ಗಣೇಶ್ ಬಂಡಾಯವೆದ್ದಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಗಣೇಶ್ ಈ ಬಾರಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಚಾಮರಾಜಪೇಟೆ ಕ್ಷೇತ್ರದ ಟಿಕೆಟ್ ಸಿಗುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಬಂಡಾಯ ಎದ್ದಿರುವ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷದ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಒಂದು ಪಕ್ಷ ಟಿಕೆಟ್ ಸಿಗದಿದ್ದರೆ ಅನ್ಯ ಮಾರ್ಗ ಹುಡುಕಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬಲ್ಲ ಮೂಲಗಳ ಪ್ರಕಾರ ಬಿ.ವಿ.ಗಣೇಶ್ ಜೆಡಿಎಸ್ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ನಾಳೆ ಮತ್ತೊಂದು ಸಭೆ: ಮಹಾಲಕ್ಷ್ಮೀ ಬಡಾವಣೆಯಲ್ಲಿ ನೆ.ಲ.ನರೇಂದ್ರಬಾಬು ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕಿರುವುದರಿಂದ ಮುನಿಸಿಕೊಂಡಿರುವ ಟಿಕೆಟ್ ಆಕಾಂಕ್ಷಿಗಳಾದ ಎಂ.ನಾಗರಾಜ್, ಮಾಜಿ ಉಪಮಹಾಪೌರ ಎಸ್.ಹರೀಶ್ ಅವರೊಂದಿಗೆ ಬಿ.ಎಸ್.ಯಡಿಯೂರಪ್ಪ ನಾಳೆ ಸಂಧಾನ ಸಭೆ ನಡೆಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ