ಚಿಕ್ಕಮಗಳೂರು, ಏ.18- ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕ ಹಾಗೂ ಓರಿಯಂಟಲ್ ಇನ್ಶೂರೆನ್ಸ್ ಕಂಪನಿಯ ನಿವೃತ್ತ ವ್ಯವಸ್ಥಾಪಕ ಜಿ.ಎಸ್. ರಾಮಸ್ವಾಮಿ (85) ನಿಧನರಾದರು.
ಅವರು ಪತ್ನಿ ಮಹಿಳಾಶ್ರಮದ ಅಧ್ಯಕ್ಷೆ ಗಿರಿಜಾ ರಾಮಸ್ವಾಮಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇಂದು ಮಧ್ಯಾಹ್ನ ಮುಕ್ತಿಧಾಮ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿತು.
ಪರಿಚಯ: ಚಿಕ್ಕಮಗಳೂರು ನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪನೆಗೆ ರಾಮಸ್ವಾಮಿ ಕಾರಣರಾಗಿದ್ದು, ಚಿಕ್ಕಂದಿನಿಂದಲೂ ಸ್ವಯಂ ಸೇವಕರಾಗಿದ್ದರು. ತುರ್ತು ಪರಿಸ್ಥಿತಿ ಜಾರಿಗೆ ಬಂದಾಗ ಅವರನ್ನು ವೀಸಾ ಕಾಯ್ದೆಯಡಿ ಬಂಧಿಸಿದ್ದು, ಬಳ್ಳಾರಿ ಕಾರಾಗೃಹದಲ್ಲಿ 2 ವರ್ಷಗಳ ಕಾಲ ಇದ್ದರು.
ಸದಾ ಸಮಾಜಮುಖಿಯಾಗಿದ್ದ ರಾಮಸ್ವಾಮಿ ಹಲವಾರು ಸಂಘ ಸಂಸ್ಥೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದು, ಅವರ ಮನೆ ಸಹ ಒಂದು ಸಾಮಾಜಿಕ ಪರಿಸರದ ಮನೆಯಾಗಿತ್ತು. ರಾಮಸ್ವಾಮಿ ಅವರ ನಿಧನಕ್ಕೆ ಶಾಸಕ ಸಿ.ಟಿ. ರವಿ, ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥಜೋಶಿ, ಸುಗಮಸಂಗೀತಗಂಗಾ ಕಾರ್ಯದರ್ಶಿ ಮಂಜುನಾಥ ಕಾಮತ್, ನಾದಚೈತನ್ಯ ಸಂಸ್ಥಾಪಕಿ ರೇಖಾಪ್ರೇಂಕುಮಾರ್, ಬಿಜೆಪಿ ಮುಖಂಡರಾದ ಸಿ.ಆರ್. ಪ್ರೇಂಕುಮಾರ್, ಹೆಚ್.ಡಿ. ತಮ್ಮಯ್ಯ, ವರಸಿದ್ಧಿ ವೇಣುಗೋಪಾಲ್, ಟಿ.ರಾಜಶೇಖರ್, ಮಲೆನಾಡು ವಿದ್ಯಾಸಂಸ್ಥೆ ಅಧ್ಯಕ್ಷ ಎನ್. ಕೇಶವಮೂರ್ತಿ, ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್, ಭಾರತ ಪರಿಕ್ರಮ ಯಾತ್ರೆ ಕೈಗೊಂಡ ಸೀತಾರಾಮ ಕೆದಿಲಾಯ, ನಗರಸಭಾಧ್ಯಕ್ಷೆ ಶಿಲ್ಪಾರಾಜಶೇಖರ್, ಕಸ್ತೂರಿ ಬಾ ಸದನದ ಕಾರ್ಯದರ್ಶಿ ಮೋಹಿನಿ ಸಿದ್ದೇಗೌಡ, ಮಹಿಳಾಶ್ರಮದ ಕಾರ್ಯದರ್ಶಿ ಅನಿತಾನಾಗೇಂದ್ರ ತಮ್ಮ ಸಂತಾಪ ಸೂಚಿಸಿದ್ದಾರೆ.