ಚುನಾವಣೆಯಲ್ಲಿ ಸೋಲಿಸಲು ಸಾಧ್ಯವಿಲ್ಲ ಎಂದು ತಿಳಿದು ಬಿಜೆಪಿಯವರು ಶಾಸಕ ಬಿ.ಶಿವಣ್ಣರವರ ಮನೆ ಮೇಲೆ ಐಟಿ ದಾಳಿ:

ಆನೇಕಲ್, ಏ.18 – ಆನೇಕಲ್ ಕ್ಷೇತ್ರದ ಶಾಸಕ ಬಿ.ಶಿವಣ್ಣರವರನ್ನು ವಿಧಾನ ಸಭಾ ಚುನಾವಣೆಯಲ್ಲಿ ಸೋಲಿಸಲು ಸಾಧ್ಯವಿಲ್ಲ ಎಂದು ತಿಳಿದು ಬಿಜೆಪಿಯವರು ಶಾಸಕ ಬಿ.ಶಿವಣ್ಣರವರ ಮನೆ ಮೇಲೆ ಐಟಿ ದಾಳಿ ಮಾಡಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಭಾಸ್ಕರ್ ರೆಡ್ಡಿ ಆರೋಪಿಸಿದರು.
ಚಂದಾಪುರ ವೃತ್ತದಲ್ಲಿ ಐಟಿ ದಾಳಿ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಬಿ.ಶಿವಣ್ಣರವರು ಆನೇಕಲ್ ಕ್ಷೇತ್ರದಲ್ಲಿ ಶಾಸಕರಾದ ಮೇಲೆ ಕಳೆದ 18 ವರ್ಷಗಳಲ್ಲಿ ಆಗದ ಅಭಿವೃದ್ದಿ ಕಾರ್ಯಗಳನ್ನು 5 ವರ್ಷದಲ್ಲಿ ಮಾಡಿ ತೋರಿಸಿ ಜನ ಮೆಚ್ಚುಗೆ ಗಳಿಸಿದ್ದು ಈ ಬಾರಿಯೂ ಅಧಿಕ ಮತದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.
ಶಿವಣ್ಣರವರನ್ನು ನೇರವಾಗಿ ಎದುರಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತ ಬಿಜೆಪಿಯವರು ಕೇಂದ್ರಸರ್ಕಾರದ ಕಪಿಮುಷ್ಠಿಯಲ್ಲಿರುವ ಐಟಿ ಅಧಿಕಾರಿಗಳ ಮೂಲಕ ಅವರ ಮನೆಯ ಮೇಲೆ ದಾಳಿ ಮಾಡಿಸಿರುವುದು ಖಂಡನೀಯ ಎಂದು ಹೇಳಿದರು.
ಎಡಿಎ ಮಾಜಿ ನಿರ್ದೇಶಕ ಬೊಮ್ಮಸಂದ್ರ ಲಿಂಗಣ್ಣ ಮಾತನಾಡಿ ಚುನಾವಣೆ ಹೊಸ್ತಿಲಿನಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡಿರುವುದು ಇತಿಹಾಸದಲ್ಲಿ ಪ್ರಥಮ ವಾಗಿದೆ ಎಂದರು.
ಮುಖ್ಯ ಮಂತ್ರಿ ಸಿದ್ದರಾಮಯ್ಯರವರು ಯಾವುದೇ ಕಳಂಕ ಇಲ್ಲದೆ ಐದು ವರ್ಷಗಳ ಆಡಳಿತ ನಡೆಸಿ ರಾಜ್ಯದ ಸರ್ವತೋಮುಖ ಅಬಿವೃದ್ಧಿಗೆ ದುಡಿದಿದ್ದು ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನ ಗಳಿಸಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಹೀಲಲಿಗೆ ಜಗನ್ನಾಥ್ ರೆಡ್ಡಿ, ಕೆ. ರಾಜಣ್ಣ, ಸುಶೀಲಮ್ಮ, ಮುನಿವೀರಪ್ಪ, ರಾಮಚಂದ್ರಾರೆಡ್ಡಿ, ಗೋಪಾಲ್ ರೆಡ್ಡಿ, ನಾಗವೇಣಿ, ನರ್ಮದಾ, ವೀಣಾ ಶ್ರೀಧರ್, ಕಿರಣ್ ರೆಡ್ಡಿ, ಭಾರತಿ ಮುನಿರಾಜು, ಪುರುಷೋತ್ತಮ್ ರೆಡ್ಡಿ, ಕೃಷ್ಣಾರೆಡ್ಡಿ, ಬಾಸ್ಕರ್ ರೆಡ್ಡಿ ಮತ್ತಿತರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ