ಬೆಂಗಳೂರು, ಏ.18- ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಘೋಷಿಸಲ್ಪಟ್ಟಿರುವ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ತವರು ಜಿಲ್ಲೆ ಶಿವಮೊಗ್ಗದ ಶಿಕಾರಿಪುರದಲ್ಲಿ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ.
ನಾಳೆ ಶಿಕಾರಿಪುರದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅಪಾರ ಬೆಂಬಲಿಗರೊಂದಿಗೆ ತಾಲ್ಲೂಕು ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸುವರು.
ಈ ವೇಳೆ ಛತ್ತೀಸ್ಘಡದ ಮುಖ್ಯಮಂತ್ರಿ ಡಾ.ರಮಣಸಿಂಗ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್, ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವರಾದ ಅನಂತಕುಮಾರ್, ಅನಂತಕುಮಾರ್ ಹೆಗಡೆ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರು ಭಾಗವಹಿಸಲಿದ್ದಾರೆ.
ರಾಜ್ಯಾದ್ಯಂತ ಯಡಿಯೂರಪ್ಪ ಅಭ್ಯರ್ಥಿಗಳ ಪರ ಪ್ರಚಾರ ನಡೆಸಬೇಕಾಗಿರುವ ಹಿನ್ನೆಲೆಯಲ್ಲಿ ನಾಳೆ ಬಿಜೆಪಿ ಶಕ್ತಿ ಪ್ರದರ್ಶಿಸಲು ಮುಂದಾಗಿದೆ. ಸರಿಸುಮಾರು 50 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ಒಗ್ಗೂಡಿಸಲು ಯಡಿಯೂರಪ್ಪನವರ ಪುತ್ರ ಹಾಗೂ ಹಾಲಿ ಶಾಸಕ ಬಿ.ವೈ.ರಾಘವೇಂದ್ರ ಸಜ್ಜಾಗಿದ್ದಾರೆ.
ಮೇ 8ರವರೆಗೆ ರಾಜ್ಯದ 224 ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಿರುವ ಯಡಿಯೂರಪ್ಪ ಮೇ 8ರಿಂದ 10ರವರೆಗೆ ಶಿಕಾರಿಪುರದಲ್ಲಿ ಮತ ಯಾಚನೆ ಮಾಡುವರು.ಕೇವಲ ಎರಡು ದಿನಗಳಲ್ಲಿ ಮಾತ್ರ ಅವರು ತವರಿನಲ್ಲಿ ಪ್ರಚಾರ ಮಾಡಲಿದ್ದಾರೆ. ಉಳಿದಂತೆ ಕ್ಷೇತ್ರದ ಉಸ್ತುವಾರಿಯನ್ನು ಪುತ್ರ ರಾಘವೇಂದ್ರ ಹಾಗೂ ಬೆಂಬಲಿಗರು ನೋಡಿಕೊಳ್ಳಲಿದ್ದಾರೆ.
ಯಡಿಯೂರಪ್ಪನವರಿಗೆ ಇದು 8ನೇ ಚುನಾವಣೆಯಾಗಿದೆ. ಒಂದು ಬಾರಿ ಸೋತು ಆರು ಬಾರಿ ಶಿಕಾರಿಪುರದಿಂದ ಗೆದ್ದುಬಂದಿದ್ದಾರೆ.