ಬಹುನಿರೀಕ್ಷಿತ ಬಿಜೆಪಿಯ ಮೂರನೇ ಪಟ್ಟಿ ಇಂದು ಬಿಡುಗಡೆ

ಬೆಂಗಳೂರು, ಏ.18-ತೀವ್ರ ಕಗ್ಗಂಟಾಗಿ ಪರಿಣಮಿಸಿರುವ ಬಹುನಿರೀಕ್ಷಿತ ಬಿಜೆಪಿಯ ಮೂರನೇ ಪಟ್ಟಿ ಇಂದು ಬಿಡುಗಡೆಯಾಗಲಿದೆ.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಈವರೆಗೂ 154 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದೆ. ಉಳಿದಿರುವ 70 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ.

ಈಗಾಗಲೆ ಬಿಡುಗಡೆಯಾಗಿರುವ ಒಂದು ಮತ್ತು ಎರಡನೇ ಪಟ್ಟಿಯಲ್ಲಿ ಟಿಕೆಟ್ ವಂಚಿತರು ಪಕ್ಷದ ವಿರುದ್ಧ ಬಂಡಾಯ ಸಾರಿರುವುದರಿಂದ 3ನೇ ಪಟ್ಟಿಯಲ್ಲೂ ಭಿನ್ನಮತ ಭುಗಿಲೇಳಬಹುದೆಂಬ ಆತಂಕ ವರಿಷ್ಠರನ್ನು ಕಾಡುತ್ತಿದೆ.

ಇಂದು ಸಂಜೆಯೊಳಗೆ ಯಾವುದೇ ಕ್ಷಣದಲ್ಲಿ ಬಿಡುಗಡೆಯಾಗಲಿರುವ ಪಟ್ಟಿಯಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ್ ಕಣಕ್ಕಿಳಿಯುವ ಸಂಭವವಿದೆ. ಶೋಭಾ ಕರಂದ್ಲಾಜೆ ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತು ನಿನ್ನೆಯಿಂದ ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ.

2008ರ ವಿಧಾನಸಭೆ ಚುನಾವಣೆಯಲ್ಲಿ ಯಶವಂತಪುರದಿಂದ ಸ್ಪರ್ಧಿಸಿ ಕೇಲವ ಒಂದು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಒಂದು ವೇಳೆ ಶೋಭಾ ಕರಂದ್ಲಾಜೆ ಯಶವಂತಪುರದಿಂದ ಕಣಕ್ಕಿಳಿದರೆ ಈ ಕ್ಷೇತ್ರ ರಾಜ್ಯದಲ್ಲೇ ಹೈ ವೋಲ್ಟೇಜ್ ಕ್ಷೇತ್ರವೆನಿಸಲಿದೆ.

ಏಕೆಂದರೆ ಕಾಂಗ್ರೆಸ್‍ನ ಹಾಲಿ ಶಾಸಕ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಎಸ್.ಟಿ.ಸೋಮಶೇಖರ್ ಎರಡನೇ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಇನ್ನು ಬಾಗಲಕೋಟೆ ಜಿಲ್ಲೆಯ ಬಾದಾಮಿ ವಿಧಾನಸಭಾ ಕ್ಷೇತ್ರದಿಂದ ಹಾಲಿ ಸಂಸದ ಪಿ.ಸಿ.ಗದ್ದಿಗೌಡರ್ ಸ್ಪರ್ಧಿಸುವ ಸಾಧ್ಯತೆ ಇದೆ. ಒಂದು ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕ್ಷೇತ್ರದಿಂದ ಕೊನೆ ಕ್ಷಣದಲ್ಲಿ ಸ್ಪರ್ಧಿಸಿದರೆ ಕೊನೆಯ ಕ್ಷಣದವರೆಗೂ ಬಾದಾಮಿ ಬಿಜೆಪಿ ಅಭ್ಯರ್ಥಿಯ ಹೆಸರನ್ನು ಉಳಿಸಿಕೊಳ್ಳಲಿದೆ.
ಅಚ್ಚರಿಯ ರೀತಿಯಲ್ಲಿ ಬಳ್ಳಾರಿ ಸಂಸದ ಶ್ರೀರಾಮುಲು ಅವರನ್ನು ಬಾದಾಮಿಯಿಂದಲೂ ಕಣಕ್ಕಿಳಿಸಿ ಸಿದ್ದರಾಮಯ್ಯನವರಿಗೆ ಟಾಂಗ್ ಕೊಡಲು ಕಮಲ ಪಡೆ ಸಜ್ಜಾಗಿದೆ.

ಕಗ್ಗಾಂಟಾದ ಕ್ಷೇತ್ರಗಳು:
ಇನ್ನು 70 ಕ್ಷೇತ್ರಗಳ ಪೈಕಿ ಬಿಜೆಪಿ ನಾಯಕರಿಗೆ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ತೀವ್ರ ಕಗ್ಗಂಟಾಗಿ ಪರಿಣಮಿಸಿದೆ.
ಬೆಂಗಳೂರಿನ ಯಶವಂತಪುರ, ಶಾಂತಿನಗರ, ಸರ್ವಜ್ಞನಗರ, ಪುಲಿಕೇಶಿನಗರ, ಉಡುಪಿ, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ತರೀಕೆರೆ, ಹರಪನಹಳ್ಳಿ ಸೇರಿದಂತೆ ಕೆಲವು ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಿರುವುದೇ ಈ ಸಮಸ್ಯೆಗೆ ಮೂಲ ಕಾರಣ.

ಉಡುಪಿಯಲ್ಲಿ ಮಾಜಿ ಶಾಸಕ ರಘುಪತಿ ಭಟ್ ತಮಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಆದರೆ ಸಂಸದೆ ಶೋಭಾ ಕರಂದ್ಲಾಜೆ ತಮ್ಮ ಆಪ್ತರೊಬ್ಬರಿಗೆ ಟಿಕೆಟ್ ಕೊಡಿಸಲು ಕಸರತ್ತು ನಡೆಸಿದ್ದಾರೆ.

ಹರಪನಹಳ್ಳಿಯಲ್ಲಿ ಮಾಜಿ ಸಚಿವ ಕರುಣಾಕರ ರೆಡ್ಡಿ ತಮಗೆ ಟಿಕೆಟ್ ನೀಡುವಂತೆ ವರಿಷ್ಠರ ಮೇಲೆ ಒತ್ತಡ ಹಾಕಿದ್ದರೆ ಮತ್ತೋರ್ವ ಆಕಾಂಕ್ಷಿ ಕೊಟ್ರೇಶ್ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಹೀಗೆ ಹಲವಾರು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಿರುವುದರಿಂದ ಕೊನೆ ಕ್ಷಣದವರೆಗೂ ಯಾರಿಗೆ ಟಿಕೆಟ್ ಸಿಗಲಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಸಂಭಾವ್ಯ ಅಭ್ಯರ್ಥಿಗಳು:
ಉಡುಪಿ-ರಘುಪತಿ ಭಟ್
ಭದ್ರಾವತಿ- ಪ್ರವೀಣ್ ಪಾಟೀಲ್
ಹರಿಹರ-ಬಿ.ಪಿ.ಹರೀಶ್
ಮಾಯಕೊಂಡ- ಬಸವರಾಜ ನಾಯಕ್
ಹರಪನಹಳ್ಳಿ-ಕರುಣಾಕರ ರೆಡ್ಡಿ
ಕೂಡ್ಲಿಗಿ-ಎನ್.ವೈ.ಗೋಪಾಲಕೃಷ್ಣ
ಕೊಪ್ಪಳ- ಅಂಬರೀಶ್ ಕರಡಿ/ಚಂದ್ರಶೇಖರ್
ಜಗಳೂರು-ರಾಮಚಂದ್ರ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ