ಬಿಜೆಪಿ ರಾಜ್ಯ ವಿಧಾನಸಭಾ ಚುನಾವಣೆಗೆ 2ನೆ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆ ಮೈಸೂರಿನಲ್ಲಿ ಬಂಡಾಯದ ಬಿಸಿ:

ಮೈಸೂರು, ಏ.17- ಬಿಜೆಪಿ ರಾಜ್ಯ ವಿಧಾನಸಭಾ ಚುನಾವಣೆಗೆ 2ನೆ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆ ಮೈಸೂರಿನಲ್ಲಿ ಬಂಡಾಯದ ಬಿಸಿ ತಟ್ಟಿದೆ.
2ನೆ ಪಟ್ಟಿಯಲ್ಲಿ ಮೈಸೂರಿನ ನರಸಿಂಹ ರಾಜ (ಎನ್‍ಆರ್) ಕ್ಷೇತ್ರಕ್ಕೆ ಇತ್ತೀಚೆಗೆ ಜೆಡಿಎಸ್ ತೊರೆದು ಬಿಜೆಪಿ ಸೇರಿದ ಮಾಜಿ ಮೇಯರ್ ಸಂದೇಶ ಸ್ವಾಮಿ ಅವರಿಗೆ ಟಿಕೆಟ್ ನೀಡಲಾಗಿದೆ. ಇವರಿಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಬಂಡಾಯ ಭುಗಿಲೆದ್ದಿದೆ.
ನರಸಿಂಹ ರಾಜ ಕ್ಷೇತ್ರದ ಟಿಕೆಟ್ ಆಕಾಂಕ್ಷಿತರಾದ ಬಿ.ಎಂ.ನಟರಾಜ್ ಅವರು ಬಂಡಾಯದ ಬಾವುಟ ಹಾರಿಸಿದ್ದಾರೆ.
ಮೈಸೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಸದಸ್ಯರಾಗಿದ್ದ ನಟರಾಜ್ ಅವರು ಎನ್.ಆರ್.ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಲು ಜೆಡಿಎಸ್ ತೊರೆದು ಆ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.
ಚುನಾವಣೆ ಘೋಷಣೆ ನಂತರ ಹಾಗೂ ಇದಕ್ಕೂ ಮುನ್ನ ಎನ್.ಆರ್.ಕ್ಷೇತ್ರದ ಟಿಕೆಟ್‍ಗಾಗಿ ಬಿಜೆಪಿ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ್ದರು.
ಚುನಾವಣೆ ಘೋಷಣೆ ನಂತರ ಜೆಡಿಎಸ್‍ನಲ್ಲಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ ಸಂದೇಶ್ ಸ್ವಾಮಿಗೆ 2ನೆ ಪಟ್ಟಿಯಲ್ಲಿ ಎನ್.ಆರ್.ಕ್ಷೇತ್ರಕ್ಕೆ ಟಿಕೆಟ್ ನೀಡಿರುವುದನ್ನು ನಟರಾಜ್ ತೀವ್ರವಾಗಿ ವಿರೋಧಿಸಿದ್ದಾರೆ.
ರಾತ್ರಿ ಎನ್.ಆರ್.ಮೊಹಲ್ಲಾದ ದೊಡ್ಡ ತಾಯಮ್ಮ ಛತ್ರದಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿದ ನಟರಾಜ್ ಎನ್.ಆರ್.ಕ್ಷೇತ್ರದಲ್ಲಿ ಕೆಲವರ ಹುನ್ನಾರದಿಂದ ತಮಗೆ ಟಿಕೆಟ್ ತಪ್ಪಿರುವ ಬಗ್ಗೆ ಪ್ರಸ್ತಾಪಿಸಿದ್ದು , ಬೆಂಬಲಿಗರು ಈ ಬಾರಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ತಿಳಿಸಿದ್ದಾರೆ. ಹಾಗಾಗಿ ತಾವು ಬಂಡಾಯ ಅಭ್ಯರ್ಥಿಯಾಗಿ ಎನ್.ಆರ್.ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದಾಗಿ ನಟರಾಜ್ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ