ಟಿಕೆಟ್ ಸಿಗದೆ ವಂಚಿತರಾಗಿ ಪಕ್ಷದ ವಿರುದ್ಧ ಕೊತ ಕೊತ ಕುದಿಯುತ್ತಿರುವ ಬಂಡಾಯಗಾರರನ್ನು ಸಮಾಧಾನ ಪಡಿಸುವುದೇ ಕಾಂಗ್ರೆಸ್- ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ

ಬೆಂಗಳೂರು, ಏ.17-ಟಿಕೆಟ್ ಸಿಗದೆ ವಂಚಿತರಾಗಿ ಪಕ್ಷದ ವಿರುದ್ಧ ಕೊತ ಕೊತ ಕುದಿಯುತ್ತಿರುವ ಬಂಡಾಯಗಾರರನ್ನು ಸಮಾಧಾನ ಪಡಿಸುವುದೇ ಕಾಂಗ್ರೆಸ್- ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.

ಸದ್ಯದ ಪರಿಸ್ಥಿತಿಯಲ್ಲಿ ಬಂಡಾಯಗಾರರು ಯಾರೊಬ್ಬರ ಮಾತನ್ನು ಕೇಳುವ ಸ್ಥಿತಿಯಲ್ಲಿಲ್ಲ. ಒಂದು ವೇಳೆ ಅಧಿಕೃತ ಅಭ್ಯರ್ಥಿ ವಿರುದ್ಧವೇ ಕಣಕ್ಕಿಳಿದರೆ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂಬ ಚಿಂತೆ ಕಾಡುತ್ತಿದೆ.

ಸಾಕಷ್ಟು ಅಳೆದು ತೂಗಿ ಗೆಲ್ಲುವ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದ್ದೇವೆ ಎಂದು ಪಕ್ಷದ ಮುಖಂಡರು ಹೇಳುತ್ತಿದ್ದರಾದರೂ ಟಿಕೆಟ್ ಸಿಗದೆ ಮುನಿಸಿಕೊಂಡಿರುವವರು ಟಿಕೆಟ್ ತಪ್ಪಲು ಕಾರಣಕರ್ತರಾದವರಿಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ.

ಪಕ್ಷದಲ್ಲಿ ಉಳಿದುಕೊಂಡರೆ ಸೂಕ್ತ ಸ್ಥಾನಮಾನ ನೀಡುವುದಾಗಿ ಮುಖಂಡರು ಮೂಗಿಗೆ ತುಪ್ಪ ಸವರುತ್ತಿದ್ದರಾದರೂ ನಾವು ಇಂತಹ ಆಮಿಷಗಳಿಗೆ ಬಲಿಯಾಗುವುದಿಲ್ಲ ಎನ್ನುವ ಮೂಲಕ ಭಿನ್ನಮತೀಯರು ಸ್ಪರ್ಧಿಸಿಯೇ ತೀರುತ್ತೇವೆ ಎಂದು ಹಠಕ್ಕೆ ಬಿದ್ದಿದ್ದಾರೆ.

ಹಲವರು ಬೇರೆ ಪಕ್ಷಗಳತ್ತ ಮುಖ ಮಾಡುತ್ತಿದ್ದಾರೆ. ಕೊನೆ ಕ್ಷಣದವರೆಗೂ ಭಿನ್ನಮತೀಯರ ಮನವೊಲಿಸುವ ಕಾರ್ಯವನ್ನು ನಾಯಕರು ನಡೆಸುತ್ತಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೆಲವು ಭಿನ್ನಮತೀಯರನ್ನು ಕರೆದು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನಿಮ್ಮ ದಾರಿ ನಿಮಗೆ, ನಮ್ಮ ದಾರಿ ನಮಗೆ. ಯಾವುದೇ ಕಾರಣಕ್ಕೂ ಇಟ್ಟ ಹೆಜ್ಜೆ ಹಿಂದೆ ತೆಗೆಯುವುದಿಲ್ಲ ಎಂದು ಶಪಥ ಮಾಡಿದ್ದಾರೆ.
ಟಿಕೆಟ್ ಸಿಗದೆ ಕುಪಿತಗೊಂಡಿರುವವರನ್ನು ಸಮಾಧಾನ ಪಡಿಸುವಂತೆ ಕೇಂದ್ರ ವರಿಷ್ಠರು ರಾಜ್ಯ ನಾಯಕರಿಗೆ ಸೂಚನೆ ಕೊಟ್ಟಿದ್ದಾರೆ. ಭಿನ್ನಮತೀಯರು ಮಾತ್ರ ಈಗಾಗಲೇ ಸೆಡ್ಡು ಹೊಡೆದು ಮುಂದೆ ಹೋಗಿದ್ದಾರೆ.

ತುಮಕೂರಿನಲ್ಲಿ ಸೊಗಡು ಶಿವಣ್ಣ, ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‍ನಲ್ಲಿ ಎಂ.ನಾಗರಾಜ್, ಎಸ್.ಹರೀಶ್, ಸಾಗರದ ಗೋಪಾಲಕೃಷ್ಣ ಬೇಳೂರು, ನಂಜನಗೂಡಿನಿಂದ ಕೋಟೆ ಶಿವಣ್ಣ, ಕಲಘಟಗಿಯಿಂದ ಲಿಂಬಣ್ಣನವರ್, ಗದಗದಲ್ಲಿ ಶ್ರೀಶೈಲಪ್ಪ ಬಿದರೂರು ಸೇರಿದಂತೆ ಮತ್ತಿತರ ಕಡೆ ಭಿನ್ನಮತೀಯ ಕಾವು ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ.

ತುಮಕೂರು ನಗರದಿಂದ ಸೊಗಡು ಶಿವಣ್ಣ ಟಿಕೆಟ್ ಕೈ ತಪ್ಪಿದ್ದರಿಂದ ತಮ್ಮ ಬೆಂಬಲಿಗರ ಸಭೆ ಕರೆದಿದ್ದಾರೆ. ಮೂಲಗಳ ಪ್ರಕಾರ ಅವರು ಅನ್ಯ ಪಕ್ಷದತ್ತ ಮುಖ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕಲಘಟಗಿಯಲ್ಲಿ ಆಕಾಂಕ್ಷಿಯಾಗಿದ್ದ ಲಿಂಬಣ್ಣನವರ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆಂದು ಘೋಷಿಸಿದ್ದಾರೆ. ಇನ್ನು ನಂಜನಗೂಡು ಮೀಸಲು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಮಾಜಿ ಸಚಿವ ಶಿವಣ್ಣ ಕೂಡ ಬಿಜೆಪಿ ಬಿಡುವ ತೀರ್ಮಾನಕ್ಕೆ ಬಂದಿದ್ದಾರೆ.
ಹೀಗೆ ಹಲವಾರು ಕ್ಷೇತ್ರಗಳಲ್ಲಿ ಟಿಕೆಟ್ ಸಿಗದೆ ಮುನಿಸಿಕೊಂಡಿರುವ ಭಿನ್ನಮತೀಯರು ಬಿಜೆಪಿಗೆ ತಲೆ ನೋವಾಗಿ ಪರಿಣಮಿಸಿದ್ದಾರೆ. ಕೆಲವು ಕಡೆ ಬೆಂಬಲಿಗರು ಟಯರ್‍ಗೆ ಬೆಂಕಿ ಹಚ್ಚಿದರೆ, ಮತ್ತಿತರೆಡೆ ರಸ್ತೆ ತಡೆ ನಡೆಸಿದ್ದಾರೆ. ಕಲಘಟಗಿಯಲ್ಲಿ ನಿಂಬಣ್ಣನವರ ಬೆಂಬಲಿಗರು ಬೆಳಗ್ಗಿನಿಂದಲೇ ಬಂದ್‍ಗೆ ಕರೆ ಕೊಟ್ಟಿದ್ದರು. ಪರಿಣಾಮ ಇಡೀ ನಗರವೇ ಸ್ತಬ್ಧಗೊಂಡಿತ್ತು.

ಮೂರನೇ ಪಟ್ಟಿಯಲ್ಲೂ ಟಿಕೆಟ್ ಸಿಗದವರು ಬಂಡಾಯವೇಳುವ ಸಾಧ್ಯತೆ ಇರುವುದರಿಂದ ಬಿಜೆಪಿಗೆ ಭಿನ್ನಮತೀಯರು ಮಗ್ಗಲು ಮುಳ್ಳಾಗಿ ಕಾಡುತ್ತಿದ್ದಾರೆ.
ಸಿ.ವಿ.ರಾಮನ್ ನಗರ ಕಾಂಗ್ರೆಸ್ ಟಿಕೆಟ್ ವಂಚಿತ ಮಹದೇವಪ್ಪ ಆಪ್ತರಾಗಿದ್ದ ಪಿ.ರಮೇಶ್ ಅವರು ಪಕ್ಷ ತೊರೆದು ಇಂದು ಜೆಡಿಎಸ್ ಸೇರ್ಪಡೆಯಾದರೆ, ಚಿಕ್ಕಪೇಟೆಯಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಹೇಮಚಂದ್ರ ಸಾಗರ್ ಅವರು ಕೂಡ ಜೆಡಿಎಸ್ ಪಕ್ಷ ಸೇರ್ಪಡೆಯಾದರು. ಇನ್ನು ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಶಾಸಕ ತಿಪ್ಪೇಸ್ವಾಮಿ ಟಿಕೆಟ್ ಕೈ ತಪ್ಪಿದ್ದರಿಂದ ಬಂಡಾಯವೆದ್ದಿದ್ದು, ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೈಸೂರಿನ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್‍ನಿಂದ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಮತ್ತೊಬ್ಬ ಕಾಂಗ್ರೆಸ್ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಅವರು ಬಿಜೆಪಿ ಸೇರಲು ಮುಂದಾಗಿದ್ದಾರೆ.
ಕಾಂಗ್ರೆಸ್ ಮುಖಂಡ ವಿ.ಆರ್.ಸುದರ್ಶನ್ ಅವರು ಪಕ್ಷದ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಜಾಜಿನಗರದ ಮಂಜುಳಾ ನಾಯ್ಡು, ಮಹಾಲಕ್ಷ್ಮಿಲೇಔಟ್ ಕಾಂಗ್ರೆಸ್ ಮುಖಂಡ ಗಿರೀಶ್ ಕೆ.ನಾಶಿ ಪಕ್ಷದ ವಿರುದ್ಧ ಸಿಡಿದೆದ್ದಿದ್ದಾರೆ.

ಪದ್ಮನಾಭನಗರದಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದ ಡಿ.ವೆಂಕಟೇಶ್‍ಮೂರ್ತಿ, ಚೇತನ್‍ಗೌಡ, ಎಂ.ಶ್ರೀನಿವಾಸ್ ಅವರೂ ಕೂಡ ಪರ್ಯಾಯ ಚಿಂತನೆ ನಡೆಸಿದ್ದಾರೆ. ಒಟ್ಟಾರೆ ಕಾಂಗ್ರೆಸ್-ಬಿಜೆಪಿಯಲ್ಲಿ ಇಂದೂ ಕೂಡ ಆಕ್ರೋಶ ಕಟ್ಟೆ ಒಡೆದಿದೆ.

ತೇಪೆ ಹಾಕಲು ವರಿಷ್ಠರು ನಡೆಸುತ್ತಿರುವ ಪ್ರಯತ್ನ ಕೈಗೂಡಿದಂತೆ ಕಂಡು ಬಂದಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ