ಕಾಂಗ್ರೆಸ್ ಶಾಸಕ ಎನ್.ವೈ. ಗೋಪಾಲಕೃಷ್ಣ ನಾಳೆ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆ

????????????????????????????????????

ಬೆಂಗಳೂರು, ಏ.17-ಕಾಂಗ್ರೆಸ್‍ನಿಂದ ಟಿಕೆಟ್ ಸಿಗದೆ ಕುಪಿತರಾಗಿರುವ ಶಾಸಕ ಎನ್.ವೈ. ಗೋಪಾಲಕೃಷ್ಣ ನಾಳೆ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಗೋಪಾಲಕೃಷ್ಣ ಅವರ ಕುಟುಂಬದ ಎಲ್ಲಾ ಸದಸ್ಯರು ಹಾಗೂ ಬೆಂಬಲಿಗರು ಬಿಜೆಪಿ ಸೇರಲು ಸಮ್ಮತಿಸಿದ್ದು, ಬಳ್ಳಾರಿ ಜಿಲ್ಲೆಯ ಕೂಡ್ಲಗಿ ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಂಭವವಿದೆ.

ಕಳೆದ ರಾತ್ರಿ ಗೋಪಾಲಕೃಷ್ಣ ಅವರನ್ನು ಭೇಟಿ ಮಾಡಿದ ಸಂಸದ ಶ್ರೀರಾಮುಲು ಹಾಗೂ ಮಾಜಿ ಸಚಿವ ಜನಾರ್ಧನ ರೆಡ್ಡಿ ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮೂಲಗಳ ಪ್ರಕಾರ ಎನ್.ವೈ.ಗೋಪಾಲಕೃಷ್ಣ ಬಳ್ಳಾರಿ ಜಿಲ್ಲೆಯ ಪರಿಶಿಷ್ಟ ವರ್ಗದ ಮೀಸಲು ಕ್ಷೇತ್ರವಾದ ಕೂಡ್ಲಗಿಯಿಂದ ಟಿಕೆಟ್ ನೀಡುವ ಸಂಭವವಿದೆ. ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಗೆದ್ದಿದ್ದ ಅವರಿಗೆ ಪಕ್ಷ ಟಿಕೆಟ್ ನೀಡಲು ನಿರಾಕರಿಸಿತ್ತು. ಇದರಿಂದ ಮುನಿಸಿಕೊಂಡ ಅವರು ಕಾಂಗ್ರೆಸ್‍ಗೆ ಕೈ ಕೊಟ್ಟು, ಕಮಲ ಮುಡಿಗೇರಿಸಿಕೊಳ್ಳಲು ಮುಂದಾಗಿದ್ದಾರೆ.

ಈ ಹಿಂದೆ ಸತತ ನಾಲ್ಕು ಬಾರಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನಿಂದ ಗೆದ್ದಿದ್ದ ಗೋಪಾಲಕೃಷ್ಣ 2013ರ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‍ಆರ್ ತಿಪ್ಪೇಸ್ವಾಮಿ ಎದುರು ಪರಾಭವಗೊಂಡಿದ್ದರು. ಇದೀಗ ಮೊಳಕಾಲ್ಮೂರಿನಿಂದ ಸಂಸದ ಶ್ರೀರಾಮುಲು ಕಣಕ್ಕಿಳಿದಿರುವ ಕಾರಣ ಅವರ ಸೇರ್ಪಡೆ ಬಿಜೆಪಿಗೆ ಆನೆಬಲ ಬಂದಂತಾಗಿದೆ.

ಏಕೆಂದರೆ ಕ್ಷೇತ್ರದಲ್ಲಿ ಈಗಲೂ ಗೋಪಾಲಕೃಷ್ಣ ತಮ್ಮದೇ ಆದ ಹಿಡಿತ ಹೊಂದಿದ್ದಾರೆ. ಜಿಲ್ಲೆಯಲ್ಲಿ ನಿರ್ಣಾಯಕವಾಗಿರುವ ವಾಲ್ಮೀಕಿ ಸಮುದಾಯದ ಮತಗಳನ್ನು ಪಡೆಯಲು ಇದರಿಂದ ಅನುಕೂಲವಾಗುತ್ತದೆ ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ.

ಇನ್ನು ಗೋಪಾಲಕೃಷ್ಣ ಅವರನ್ನು ಕರೆತರುವಲ್ಲಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ. ಆಪ್ತನ ಗೆಲುವಿಗೆ ರೆಡ್ಡಿ ಈಗಾಗಲೇ ತೆರೆ ಮರೆಯಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ.

ಇದರ ಮೊದಲ ಹಂತವಾಗಿಯೇ ಗೋಪಾಲಕೃಷ್ಣ ಬಿಜೆಪಿಗೆ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿರುವ ಮತ್ತಷ್ಟು ಪ್ರಮುಖರನ್ನು ರೆಡ್ಡಿ ಸೆಳೆಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕೂಡ್ಲಗಿಯಿಂದ ಗೋಪಾಲಕೃಷ್ಣ ಸ್ಪರ್ಧಿಸಿದರೆ ಅವರ ಗೆಲುವಿನ ಜವಾಬ್ದಾರಿಯನ್ನು ಶ್ರೀರಾಮುಲು ವಹಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ