ಬೆಂಗಳೂರು,ಏ.16- ಕಾಂಗ್ರೆಸ್ ಒಂದೇ ಹಂತದಲ್ಲಿ 218 ವಿಧಾನಸಭಾ ಕ್ಷೇತ್ರಗಳಿಗೆ ಟಿಕೆಟ್ ಬಿಡುಗಡೆ ಮಾಡಿದ ಪರಿಣಾಮ ಬಿಜೆಪಿ ಕೊನೆ ಕ್ಷಣದಲ್ಲಿ ತನ್ನ ಕಾರ್ಯ ತಂತ್ರವನ್ನು ಬದಲಾಯಿಸಿಕೊಂಡಿದೆ.
ಎಲ್ಲವೂ ನಿರೀಕ್ಷೆಯಂತೆ ನಡೆದಿದ್ದರೆ ಕಳೆದ ರಾತ್ರಿಯೇ ನವದೆಹಲಿಯಲ್ಲಿ 80ರಿಂದ 100 ವಿಧಾನಸಭಾ ಕ್ಷೇತ್ರಗಳಿಗೆ ಬಿಡುಗಡೆಯಾಗಬೇಕಿತ್ತು. ಇದಕ್ಕಾಗಿ ವರಿಷ್ಠರು ಹಸಿರು ನಿಶಾನೆ ತೋರಿದ್ದರು.
ಬಿಜೆಪಿ ಲೆಕ್ಕಾಚಾರವನ್ನು ಒಂದೇ ಹೊಡೆತದಲ್ಲಿ ಉಲ್ಟಾ ಮಾಡಿದ ಕಾಂಗ್ರೆಸ್ ಯಾರೂ ನಿರೀಕ್ಷಿಸದ ರೀತಿಯಲ್ಲಿ 218 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿತ್ತು.
ಕೈನ ಈ ರಣತಂತ್ರದಿಂದಾಗಿ ಬೆಚ್ಚಿ ಬಿದ್ದ ಕಮಲ ಪಡೆ ತನ್ನ ಕಾರ್ಯ ತಂತ್ರವನ್ನು ಬದಲಾಯಿಸಿಕೊಳ್ಳಲು ಮುಂದಾಯಿತು. ಜಾತಿ ಸಮೀಕರಣ, ಪ್ರದೇಶವಾರು, ಸೇವಾ ಹಿರಿತನ ಸೇರಿದಂತೆ ಮತ್ತಿತರ ಮಾನದಂಡವನ್ನು ಕೈಬಿಟ್ಟು ಗೆಲ್ಲುವ ಕದುರೆಗಳನ್ನೇ ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ.
ಇಂದು ಯಾವುದೇ ವೇಳೆ ಪಟ್ಟಿ ಬಿಡುಗಡೆಯಾಗುವ ಸಂಭವವಿದ್ದು , ಕೆಲವು ಕ್ಷೇತ್ರಗಳಿಗೆ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಲೆಕ್ಕ ಹಾಕಲಾಗಿದೆ.
ಕಾಂಗ್ರೆಸ್ನಿಂದ ಕೆಲ ಶಾಸಕರು ಬಿಜೆಪಿಗೆ ಬರಬಹುದೆಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತು. ಆದರೆ ಹಾಲಿ ಎಲ್ಲ ಶಾಸಕರಿಗೆ ಕಾಂಗ್ರೆಸ್ನಲ್ಲಿ ಟಿಕೆಟ್ ನೀಡಿರುವುದರಿಂದ ಕೆಲವು ಕ್ಷೇತ್ರಗಳಲ್ಲಿ ಹೊಸ ಹುರಿಯಾಳುಗಳನ್ನು ಕಣಕ್ಕಿಳಿಸುವುದು ಬಿಜೆಪಿಗೆ ಅನಿವಾರ್ಯವಾಗಿದೆ.
ವಿಶೇಷವಾಗಿ ಹೈದರಾಬಾದ್ ಕರ್ನಾಟಕ ಭಾಗದ ಕಾಂಗ್ರೆಸ್ನ ಕೆಲ ಶಾಸಕರು ಬಿಜೆಪಿಗೆ ಬರುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಕಾಂಗ್ರೆಸ್ನಲ್ಲೇ ಅವರಿಗೆ ಟಿಕೆಟ್ ನೀಡಿರುವ ಕಾರಣ ತಮ್ಮ ನಿರ್ಧಾರವನ್ನು ಕೊನೆ ಕ್ಷಣದಲ್ಲಿ ಬದಲಾಯಿಸಿದ್ದಾರೆ. ಇದು ಬಿಜೆಪಿ ಮುಖಂಡರಿಗೆ ತಲೆನೋವಾಗಿ ಪರಿಣಮಿಸಿದೆ.
ಇನ್ನೊಂದು ಮೂಲಗಳ ಪ್ರಕಾರ ಕಾಂಗ್ರೆಸ್ನಲ್ಲಿ ಟಿಕೆಟ್ ಸಿಗದೆ ಇರುವವರು ಬಂಡಾಯ ಏಳುತ್ತಾರೆ ಎಂಬ ಸುಳಿವು ಅರಿತಿರುವ ಕೈನ ಒಡಕಿನ ಲಾಭವನ್ನು ಪಡೆಯಲು ಮುಂದಾಗಿದೆ.
ಕಾಂಗ್ರೆಸ್ನಲ್ಲಿ ಬಂಡಾಯ ಇನ್ನಷ್ಟು ಜೋರಾಗಲಿ ಎನ್ನುತ್ತಿರುವ ಬಿಜೆಪಿ ಕೊನೆ ಕ್ಷಣದಲ್ಲಿ ಸದ್ದಿಲ್ಲದೆ ಟಿಕೆಟ್ ಘೋಷಿಸಲು ರಣತಂತ್ರ ರೂಪಿಸಿದೆ. ಕಳೆದ ರಾತ್ರಿ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಸಚಿವರಾದ ಸುಷ್ಮಾ ಸ್ವರಾಜ್, ರಾಜನಾಥ್ ಸಿಂಗ, ಜೆ.ಪಿ.ನಡ್ಡಾ ಸೇರಿದಂತೆ ಮತ್ತಿತರರು ಬಹುತೇಕ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ.
ಈಗಾಗಲೇ ಇದಕ್ಕೆ ರಾಷ್ಟ್ರೀಯ ಅಧ್ಯಕ್ಷರು ಸಹಿ ಹಾಕಿದ್ದು , ಕಾಂಗ್ರೆಸ್ನಲ್ಲಿ ಬೆಂಕಿ ಹತ್ತಿಕೊಂಡಷ್ಟು ಪಕ್ಷಕ್ಕೆ ಲಾಭ ಎಂಬುವುದು ಬಿಜೆಪಿ ಲೆಕ್ಕಾಚಾರ. ಹೀಗಾಗಿಯೇ ನಿನ್ನೆ ಬಿಡುಗಡೆ ಮಾಡಬೇಕಿದ್ದ ಪಟ್ಟಿಯನ್ನು ಉದ್ದೇಶಪೂರ್ವಕವಾಗಿಯೇ ವಿಳಂಬ ಮಾಡಲಾಗಿದೆ.