ರಾಜ್ಯಕ್ಕೆ ಈವರೆಗೂ ಚಾಣಾಕ್ಯ(ಅಮಿತ್ ಷಾ) ಬಂದಿದ್ದರು. ಇನ್ನು ಮುಂದೆ ಚಂದ್ರಗುಪ್ತ(ನರೇಂದ್ರ ಮೋದಿ) ಬರಲಿದ್ದಾರೆ ನೋಡಿ ಎಂದು ಬಿಜೆಪಿ ಮುಖಂಡ ಹಾಗೂ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಚಾಣಾಕ್ಯ ಎನಿಸಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಈವರೆಗೂ ರಾಜ್ಯಕ್ಕೆ ಬಂದು ಹೋಗಿದ್ದಾರೆ. ಇನ್ನು ಚಂದ್ರಗುಪ್ತ ಎನಿಸಿದ ಪ್ರಧಾನಿ ನರೇಂದ್ರ ಮೋದಿ ಬರುವುದು ಬಾಕಿ ಇದೆ. ಅವರು ಬಂದ ಮೇಲೆ ಇಡೀ ಚುನಾವಣಾ ಕಾವು ಬದಲಾಗಿದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅಲೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಪ್ರಭಾವ ಪಕ್ಷಕ್ಕೆ ಆನೆ ಬಲ ತರಲಿದೆ. ರಾಜ್ಯದಲ್ಲಿ ಈ ಬಾರಿ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದರಲ್ಲಿ ಅನುಮಾನವೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯಾವ ಸಮೀಕ್ಷೆಗಳು ಏನೇ ಹೇಳಿದರೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಈ ಹಿಂದೆ ಉತ್ತರ ಪ್ರದೇಶ, ತ್ರಿಪುರ ಸೇರಿದಂತೆ ಅನೇಕ ಕಡೆ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಕೆಲವು ಸಮೀಕ್ಷೆಗಳು ಹೇಳಿದರೆ ಇನ್ನು ಕೆಲವು ಸಮೀಕ್ಷೆಗಳು ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದ್ದವು. ಫಲಿತಾಂಶ ಬಂದಾಗ ಎಲ್ಲರೂ ಹುಬ್ಬೇರುವಂತೆ ಎಲ್ಲರೂ ನಮಗೆ ಬಹುಮತ ನೀಡಿದ್ದಾರೆ. ಕರ್ನಾಟಕದಲ್ಲೂ ಇದೇ ಫಲಿತಾಂಶ ಬರಲಿದೆ ಎಂದು ಹೇಳಿದರು.
ಬಿಜೆಪಿ ಕಾರ್ಯಕರ್ತರ ಪಕ್ಷ. ನಾವು ಬೂತ್ ಮಟ್ಟದಿಂದ ಪಕ್ಷವನ್ನು ಸಂಘಟಿಸುತ್ತಿದ್ದೇವೆ. ನಮಗೆ ಮತದಾರರ ನಾಡಿಮಿಡಿತ ಏನೆಂಬುದು ಚೆನ್ನಾಗಿ ತಿಳಿದಿದೆ. ಯಾವುದೋ ಸಮೀಕ್ಷೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು.
ನಮ್ಮಲ್ಲಿ ಟಕೆಟ್ ಹಂಚಿಕೆಯಾದ ನಂತರ ಸಣ್ಣಪುಟ್ಟ ಗೊಂದಲಗಳು ಉಂಟಾಗಿವೆ. ಅದನ್ನು ಸರಿಪಡಿಸುವಷ್ಟು ಸಾಮಥ್ರ್ಯ ನಮ್ಮಲ್ಲಿದೆ. ಕಾಂಗ್ರೆಸ್ ಟಿಕೆಟ್ ಘೋಷಣೆಯಾದ ಬಳಿಕ ಹೇಗೆ ಛಿದ್ರ ಛಿದ್ರವಾಗುತ್ತದೆ ಎಂಬುದನ್ನು ನೀವೇ ನೋಡಿ ಎಂದರು.
ಮೊಳಕಾಲ್ಮೂರಿನಲ್ಲಿ ಅನ್ಯ ಪಕ್ಷದವರ ಕೈವಾಡದಿಂದ ನಿನ್ನೆ ಗಲಭೆಯಾಗಿದೆ. ನಮ್ಮ ಪಕ್ಷದ ಅಭ್ಯರ್ಥಿ ಶ್ರೀರಾಮುಲು ಭಾರೀ ಬಹುಮತದ ಅಂತರದಿಂದ ಗೆಲ್ಲಲಿದ್ದಾರೆ. ಟಿಕೆಟ್ ಕೈ ತಪ್ಪಿದಾಗ ಇಂತಹ ಸಣ್ಣಪುಟ್ಟ ಗೊಂದಲಗಳು ಉಂಟಗುವುದು ಸರ್ವೇ ಸಾಮಾನ್ಯ.ನಮಗೆ ಅನೇಕ ಬಾರಿ ಇದರ ಅನುಭವವಾಗಿದೆ ಎಂದು ಈಶ್ವರಪ್ಪ ತಿಳಿಸಿದರು.