ಉದ್ಯೋಗಾವಕಾಶ ಒದಗಿಸುವ ಸಂಸ್ಥೆಗಳಿಗೆ ಈಗ ಹೊಸ ಸವಾಲು:

ಮುಂಬೈ, ಏ.15-ಉದ್ಯೋಗಾವಕಾಶ ಒದಗಿಸುವ ಸಂಸ್ಥೆಗಳಿಗೆ ಈಗ ಹೊಸ ಸವಾಲು ಎದುರಾಗಿದೆ. ಉತ್ತರ ಭಾರತದ ಅನೇಕ ಪ್ರತಿಭಾವಂತ ಯುವಕ-ಯುವತಿಯರು ಉದ್ಯೋಗ ಅರಸಿ ಬೆಂಗಳೂರು ಸೇರಿದಂತೆ ದಕ್ಷಿಣ ರಾಜ್ಯಗಳ ಮಹಾನಗರಗಳಿಗೆ ವಲಸೆ ಬರುತ್ತಿರುವುದೇ ಇದಕ್ಕೆ ಕಾರಣ.
ದಕ್ಷಿಣ ರಾಜ್ಯಗಳಲ್ಲಿ ಇತ್ತೀಚಿಗೆ ಹೊಸ ಹೊಸ ಸಂಸ್ಥೆಗಳು, ನವೋದ್ಯಮ (ಸ್ಟಾರ್ಟ್‍ಅಪ್) ಕಂಪನಿಗಳು, ಇ-ಕಾಮರ್ಸ್ ವಹಿವಾಟುಗಳು ಹಾಗೂ ದೊಡ್ಡ ವ್ಯಾಪಾರ ಘಟಕಗಳು ಹೆಚ್ಚಿನ ಸಂಖ್ಯೆಯಲ್ಲಿ ಆರಂಭವಾಗಿವೆ. ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಉದ್ಯೋಗ ವಂಚಿತ ಪ್ರತಿಭಾವಂತರು ದಕ್ಷಿಣ ಪ್ರಾಂತ್ಯಗಳತ್ತ ವಲಸೆ ಬರತೊಡಗಿದ್ದಾರೆ.
ವಿಶೇಷವಾಗಿ ಬೆಂಗಳೂರು, ಹೈದರಾಬಾದ್, ಮತ್ತು ಚೆನ್ನೈ ನಗರಗಳಿಗೆ ಉತ್ತರದ ಪ್ರತಿಭೆಗಳ ವಲಸೆ ಹೆಚ್ಚಾಗಿರುವುದು ಗಮನಾರ್ಹ. ಈ ಮೂರು ನಗರಗಳು ಮಾಹಿತಿ ತಂತ್ರಜ್ಞಾನದ ತಾಣಗಳಾಗಿದ್ದು, ಈ ಕ್ಷೇತ್ರ ಶೇ.60ರಷ್ಟು ಮಂದಿಗೆ ಉದ್ಯೋಗಾವಕಾಶಗಳನ್ನು ನೀಡಿದೆ.
ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ರಾಜ್ಯಗಳಲ್ಲಿ ಉದ್ಯೋಗಾವಕಾಶ ಅಧಿಕ. ಔಪಚಾರಿಕ ವಲಯದಲ್ಲಿ ಸೃಷ್ಟಿಯಾಗುವ ಒಟ್ಟು ಹುದ್ದೆಗಳಲ್ಲಿ ದಕ್ಷಿಣ ರಾಜ್ಯಗಳ ಪಾಲು ಶೇ.40ಕ್ಕೂ ಹೆಚ್ಚು. ಪಶ್ಚಿಮ ಭಾರತದಲ್ಲಿ ಶೇ.30ರಷ್ಟು ಅವಕಾಶವಿದೆ.
ಪ್ರತಿಭಾವಂತ ಯುವತಿ-ಯುವಕರಿಗಾಗಿ ದಕ್ಷಿಣ ಭಾರತದಲ್ಲಿ ವಿಫುಲ ಅವಕಾಶಗಳಿವೆ. ಇದೇ ಕಾರಣಕ್ಕಾಗಿ ಅಲ್ಲಿನ ಯುವ ಸಮೂಹ ದಕ್ಷಿಣದತ್ತ ಮುಖ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗಿದೆ ಎಂದು ಟೀಮ್ ಲೀಸ್ ಉದ್ಯೋಗ ಸಂಸ್ಥೆಯ ಸಹ ಸ್ಥಾಪಕರಾದ ರೀತುಪರ್ಣ ಚಕ್ರವರ್ತಿ ಹೇಳುತ್ತಾರೆ.
ಬೆಂಗಳೂರಿನ ಟ್ಯಾಲಿ ಸೆಲ್ಯೂಷನ್ಸ್ ಕಂಪನಿ ಬ್ಯುಸಿನೆಸ್ ಮ್ಯಾನೇಜ್‍ಮೆಂಟ್ ಸಾಫ್ಟ್‍ವೇರ್ ಸೆಲ್ಯೂಷನ್‍ನಲ್ಲಿ ಮುಂಚೂಣಿಯಲ್ಲಿದ್ದು, ಉತ್ತರ ಭಾರತದ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡುತ್ತಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ