ನಾಳೆಯಿಂದ ಬೆಂಗಳೂರಿನಲ್ಲಿ ಇನೋವೇಟಿವ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಬೆಂಗಳೂರು, ಏ.13- ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಚಲನಚಿತ್ರ ನಿರ್ದೇಶಕರು, ನಟರು, ಲೇಖಕರು ತಮ್ಮ ತಮ್ಮ ಚಿಂತನೆ ಮತ್ತು ದೃಷ್ಟಿಕೋನಗಳನ್ನು ಹಂಚಿಕೊಳ್ಳಲು ಚಲನಚಿತ್ರೋತ್ಸವಗಳು ಉತ್ತಮ ವೇದಿಕೆಯಾಗಿದ್ದು, ಈ ನಿಟ್ಟಿನಲ್ಲಿ ನಾಳೆಯಿಂದ ಬೆಂಗಳೂರಿನಲ್ಲಿ ಇನೋವೇಟಿವ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಹಮ್ಮಿಕೊಳ್ಳಲಾಗಿದೆ.

ನಗರದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಮಟ್ಟದ ಸ್ವತಂತ್ರ ಚಿತ್ರಗಳನ್ನು ಚಿತ್ರಪ್ರೇಮಿಗಳಿಗೆ, ಚಿತ್ರೋದ್ಯಮದ ವಿದ್ಯಾರ್ಥಿಗಳಿಗೆ ತೋರಿಸಿಕೊಡಲು ಮತ್ತು ಹೇಗೆ ಚಿತ್ರಗಳನ್ನು ನಿರ್ಮಾಣ ಮಾಡಬೇಕು ಎಂಬುದರ ಬಗ್ಗೆ ಈ ಚಿತ್ರಗಳ ಮೂಲಕ ತಿಳಿಸಿಕೊಡಲಿದೆ.

ಇನೋವೇಟಿವ್ ಫಿಲಂ ಸಿಟಿಯಲ್ಲಿ ಮೂರು ದಿನಗಳ ಕಾಲ ಚಲನಚಿತ್ರೋತ್ಸವ ನಡೆಯಲಿದ್ದು, ಸುಮಾರು 70 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ ಹಾಗೂ ಚಿತ್ರರಂಗದ ಪರಿಣಿತರು, ತಯಾರಕರೊಂದಿಗೆ ಸಂವಾದ ನಡೆಯಲಿದೆ. ಈ ಚಲನಚಿತ್ರೋತ್ಸವವನ್ನು ಇನೋವೇಟಿವ್ ಫಿಲಂ ಅಕಾಡೆಮಿ ಆಯೋಜಿಸಿದ್ದು, ಕಳೆದ 10 ವರ್ಷಗಳಿಂದ ಬೆಂಗಳೂರಿನಲ್ಲಿ ಚಲನಚಿತ್ರರಂಗದ ವಿವಿ ಕ್ಷೇತ್ರಗಳಲ್ಲಿ ತರಬೇತಿ ನೀಡುತ್ತಿದೆ.

ಅಕಾಡೆಮಿಯು ಚಿತ್ರರಂಗದ ಹಲವು ಪ್ರಮುಖರು ಮತ್ತು ಬೆಂಗಳೂರು ವಿವಿಯ ಸ್ನಾತಕೋತ್ತರ ಡಿಪ್ಲಮೋ ಹಾಗೂ ಚಿತ್ರರಂಗದ ವಿವಿ ತರಬೇತಿ ನೀಡುತ್ತಿದೆ.
ಈ ಕುರಿತು ಸಲಹೆಗಾರ ರಾಕ್‍ಲೈನ್ ವೆಂಕಟೇಶ್ ಮಾತನಾಡಿ, ತಮಿಳು, ಕನ್ನಡ, ಮಲಯಾಳಂ, ತೆಲುಗು, ಹಿಂದಿ, ಬೆಂಗಾಳಿ ಇತರೆ ಭಾಷೆಗಳು ಸೇರಿದಂತೆ ಭಾರತೀಯ ಚಿತ್ರರಂಗ ಪ್ರತಿವರ್ಷ 1500 ಚಿತ್ರಗಳನ್ನು ನಿರ್ಮಾಣ ಮಾಡುತ್ತಿದೆ.

ಚಲನಚಿತ್ರರಂಗ ಜನರನ್ನು ಶೀಘ್ರವಾಗಿ ತಲುಪಿದ್ದು, ಆಕರ್ಷಿಸುತ್ತಿದೆ. ಆದರೆ, ತರಬೇತಿ ನೀಡುವಂತಹ ವ್ಯವಸ್ಥೆ ಕಡಿಮೆ ಇದೆ. ಸುಮಾರು 2000ಕ್ಕೂ ಹೆಚ್ಚು ಪ್ರತಿನಿಧಿಗಳು ಪ್ರತಿದಿನ ಬರುವ ನಿರೀಕ್ಷೆಯಿದ್ದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ.
ಏ.15ರಂದು ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ ಸಾಧಕರಿಗೆ ಕನ್ನಡ ಗೌರವ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ