ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಇಂದು ಪ್ರಕಟ:

ನವದೆಹಲಿ, ಏ.13-ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಇಂದು ಪ್ರಕಟಿಸಲಾಗಿದೆ. ಮಾಮ್ ಸಿನಿಮಾದ ಮನೋಜ್ಞ ಅಭಿನಯಕ್ಕಾಗಿ ದಿವಂಗತ ಶ್ರೀದೇವಿ ಅವರನ್ನು ಅತ್ಯುತ್ತಮ ನಟಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕ್ಯಾನ್ಸರ್‍ನಿಂದ ನಿಧನರಾದ ಹಿರಿಯ ನಟ ವಿನೋದ್ ಖನ್ನಾ ಅವರಿಗೆ ಮರಣೋತ್ತರವಾಗಿ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸಲಾಗಿದೆ.
ಸಿನಿಮಾರಂಗದ ಎಲ್ಲ ದಾಖಲೆಗಳನ್ನು ನುಚ್ಚುನೂರು ಮಾಡಿರುವ ಬಾಹುಬಲಿ ಅತ್ಯುತ್ತಮ ಜನಪ್ರಿಯ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದರೆ, ನ್ಯೂಟನ್ ಶ್ರೇಷ್ಠ ಹಿಂದಿ ಸಿನಿಮಾ ಪ್ರಶಸ್ತಿ ಗಳಿಸಿದೆ.
ಪ್ರಾದೇಶಿಕ ಭಾಷೆ ಸಿನಿಮಾಗಳ ವಿಭಾಗದಲ್ಲಿ ಹೆಬ್ಬೆಟ್ ರಾಮಕ್ಕ ಅತ್ಯುತ್ತಮ ಕನ್ನಡ ಸಿನಿಮಾ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದೆ.
ಅಸ್ಸಾಮಿ ಸಿನಿಮಾ ವಿಂಟೇಜ್ ರಾಕ್‍ಸ್ಟಾರ್ಸ್ ಅತ್ಯುತ್ತಮ ರಾಷ್ಟ್ರೀಯ ಸಿನಿಮಾ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಭಯಾನಕಂ ಮಲೆಯಾಳಂ ಸಿನಿಮಾದ ನಿರ್ದೇಶಕ ಜಯರಾಜ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ನಗರ್‍ಕೀರ್ತನ್ ಬಂಗಾಳಿ ಸಿನಿಮಾದ ಶ್ರೇಷ್ಠ ನಟನೆಗಾಗಿ ರಿದ್ದಿ ಸೇನ್ ಅತ್ಯುತ್ತಮ ನಟ ಎಂಬ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಖ್ಯಾತ ನಿರ್ದೇಶಕ ಮಣಿರತ್ನ ನಿರ್ದೇಶನದ ಕಾಟ್ರು ವೆಲಿಯಿಧೈ ಸಿನಿಮಾ ಸಂಗೀತ ಸಂಯೋಜನೆಗಾಗಿ ಎ.ಆರ್.ರೆಹಮಾನ್ ಅತ್ಯುತ್ತಮ ಸಂಗೀತ ನಿರ್ದೇಶಕ ಎಂಬ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.
ತೀರ್ಪುಗಾರರ ಮಂಡಳಿಯ ಮುಖ್ಯ ತೀರ್ಪುಗಾರ ಶೇಖರ್ ಕಪೂರ್ ಇಂದು ದೆಹಲಿಯಲ್ಲಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರಕಟಿಸಿದರು. ಮೇ 3ರಂದು ಅದ್ದೂರಿ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡಲಾಗುವುದು.
ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ
ಅತ್ಯುತ್ತಮ ನಟಿ – ಶ್ರೀದೇವಿ (ಚಿತ್ರ : ಮಾಮ್_)
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ – ವಿನೋದ್ ಖನ್ನಾ (ಮರಣೋತ್ತರ ಪ್ರಶಸ್ತಿ)
ಶ್ರೇಷ್ಠ ಜನಪ್ರಿಯ ಚಿತ್ರ – ಬಾಹುಬಲಿ
ಶ್ರೇಷ್ಠ ಹಿಂದಿ ಚಿತ್ರ _ ನ್ಯೂಟನ್
ಶ್ರೇಷ್ಠ ರಾಷ್ಟ್ರೀಯ ಸಿನಿಮಾ ವಿಂಟೇಜ್ ರಾಕ್‍ಸ್ಟಾರ್ಸ್ (ಅಸ್ಸಾಮಿ)
ಶ್ರೇಷ್ಠ ನಿರ್ದೇಶಕ ಜಯರಾಜ್ (ಭಯಾನಕಂ-ಮಲೆಯಾಳಂ)
ಶ್ರೇಷ್ಠ ನಟ ರಿದ್ದಿ ಸೇನ್ (ನಗರ್‍ಕೀರ್ತನ್-ಬಂಗಾಳಿ)
ಶ್ರೇಷ್ಠ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ (ಕಾಟ್ರು ವೆಲಿಯಿದೈ-ತಮಿಳು)
ಶ್ರೇಷ್ಠ ಕನ್ನಡ ಸಿನಿಮಾ – ಹೆಬ್ಬೆಟ್ ರಾಮಕ್ಕ
ಶ್ರೇಷ್ಠ ತೆಲುಗು ಸಿನಿಮಾ ಘಾಜಿ
ಶ್ರೇಷ್ಠ ಸಾಹಸ ಮತ್ತು ವಿಶೇಷ ಪರಿಣಾಮ -ಬಾಹುಬಲಿ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ