ಬೆಂಗಳೂರು, ಏ.12- ಪ್ರಯಾಣ ಭತ್ಯೆ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಎಂಎಲ್ಸಿಗಳ ವಿರುದ್ಧ ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ನೀಡಿದ್ದ ದೂರು ಮತ್ತೆ ಜೀವ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಮೇಲ್ಮನೆ ಸದಸ್ಯತ್ವ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಅಲ್ಲದೆ, ವಿಧಾನಸಭೆ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳಾಗಿದ್ದ ವಿಧಾನ ಪರಿಷತ್ನ ಹಲವಾರು ಸದಸ್ಯರು ಇದರಿಂದ ಆತಂಕಕ್ಕೆ ಒಳಗಾಗಿದ್ದಾರೆ. ಮೇಯರ್ ಚುನಾವಣೆ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ಆರ್.ಬಿ.ತಿಮ್ಮಾಪುರ್, ರಘು ಆಚಾರ್, ಬೋಸರಾಜ್, ಎಸ್.ರವಿ, ಎಂ.ಡಿ.ಲಕ್ಷ್ಮಿನಾರಾಯಣ್, ಸಿ.ಆರ್.ಮನೋಹರ್, ಅಪ್ಪಾಜಿಗೌಡ ಅವರು ಬೆಂಗಳೂರು ನಿವಾಸಿಗಳೆಂದು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದ್ದ ಪದ್ಮನಾಭರೆಡ್ಡಿ, ಇವರ ಸದಸ್ಯತ್ವ ಅನರ್ಹಗೊಳಿಸಬೇಕೆಂದು ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರಿಗೆ 19.7.2017ರಂದು ದೂರು ನೀಡಿದ್ದರು.
ಏ.10ರಂದು ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ದಿಢೀರ್ ನೋಟಿಸ್ ನೀಡಿ, ದೂರುದಾರರಾದ ಪದ್ಮನಾಭರೆಡ್ಡಿ ಅವರಿಗೆ ಖುದ್ದು ಹಾಜರಾಗಿ ತಾವು ನೀಡಿರುವ ದೂರಿನ ಸಂಬಂಧ ದಾಖಲಾತಿ ಒದಗಿಸುವಂತೆ ಸೂಚಿಸಿದ್ದರು. ದಾಖಲಾತಿ ಒದಗಿಸಲು ಎರಡು ದಿನ ಪದ್ಮನಾಭರೆಡ್ಡಿ ಅವರು ಕಾಲಾವಕಾಶ ಕೋರಿದ್ದರು.
ಅದರಂತೆ ಇಂದು ಮಧ್ಯಾಹ್ನ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರ ಕಚೇರಿಗೆ ತೆರಳಿ ಕರ್ನಾಟಕ ಲೆಜಿಸ್ಲೇಟಿವ್ ಕೌನ್ಸಿಲ್ ಟ್ರಾವೆಲ್ ಅಲಯನ್ಸ್ ರೂಲ್ಸ್-5ರಲ್ಲಿ ಉಲ್ಲೇಖಿಸಿರುವಂತೆ ಬೆಂಗಳೂರು ಸಭೆಯಲ್ಲಿ ಪಾಲ್ಗೊಳ್ಳುವ ವಿಧಾನ ಪರಿಷತ್ ಸದಸ್ಯರಿಗೆ ಪ್ರಯಾಣ ಭತ್ಯೆ ಕೊಡಬಾರದು. ಆದರೆ, ಮೇಲ್ಕಂಡ ಎಂಟೂ ಎಂಎಲ್ಸಿಗಳು ಪ್ರಯಾಣ ಭತ್ಯೆ ಪಡೆದಿದ್ದಾರೆ.
1957ರ ಜನಪ್ರತಿನಿಧಿ ಕಾಯ್ದೆ ಪ್ರಕಾರ, ಮತದಾರರ ಪಟ್ಟಿಯಲ್ಲಿರುವವರು ಸ್ಥಳೀಯ ನಿವಾಸಿಗಳಾಗಿರಬೇಕು. ಆದರೆ, ಇವರು ಸ್ಥಳೀಯ ಮಾಹಿತಿ ನೀಡಿ ಪ್ರಯಾಣ ಭತ್ಯೆ ಪಡೆದಿದ್ದಾರೆ. ಬುದ್ಧಿವಂತರ ಸದನವಾಗಿರುವ ವಿಧಾನ ಪರಿಷತ್ನಲ್ಲಿ ಈ ರೀತಿ ಕಾಯ್ದೆಯನ್ನು ಉಲ್ಲಂಘಿಸಿ ಪ್ರಯಾಣ ಭತ್ಯೆ ಪಡೆದಿರುವುದು ನೈತಿಕತೆಯ ಉಲ್ಲಂಘನೆಯಾಗಿರುತ್ತದೆ ಎಂದು ಪದ್ಮನಾಭರೆಡ್ಡಿ ತಮ್ಮ ದೂರಿನಲ್ಲಿ ಉಲ್ಲೇಖಿಸಿರುತ್ತಾರೆ.
ಅಲ್ಲದೆ, ಇಂಥದ್ದೇ ಪ್ರಕರಣ ಸಂಬಂಧ ಸುಳ್ಳು ಮಾಹಿತಿ ನೀಡಿ ಪ್ರಯಾಣ ಭತ್ಯೆ ಪಡೆದಿರುವ ರಾಜ್ಯಸಭೆ ಸದಸ್ಯರಾದ ಅನಿಲ್ ಶಾನಿ ಪ್ರಕರಣ ಸಿಬಿಐ ತನಿಖೆಗೆ ಶಿಫಾರಸು ಆಗಿರುವುದನ್ನು ಕೂಡ ಪದ್ಮನಾಭರೆಡ್ಡಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಮುಖಾಂತರ ಸಂವಿಧಾನ ಪರಿಚ್ಛೇದ-10ರ ಅಡಿ ಈ ಎಂಟೂ ಎಂಎಲ್ಸಿಗಳನ್ನು ತಮ್ಮ ಸದಸ್ಯತ್ವದಿಂದ ಅನರ್ಹಗೊಳಿಸಬೇಕು ಎಂದು ಅವರು ಪೂರಕ ದಾಖಲೆಗಳನ್ನು ಇಂದು ಸಭಾಪತಿಗೆ ಸಲ್ಲಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಈ ಬೆಳವಣಿಗೆಗಳು ನಡೆದಿರುವುದು. ಇನ್ನೆರಡು ದಿನಗಳಲ್ಲಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ತೀರ್ಪು ಹೊರಹಾಕಲಿರುವುದರಿಂದ ಪರಿಷತ್ ಸದಸ್ಯರಲ್ಲಿ ಸಹಜವಾಗಿಯೇ ಭೀತಿ ಎದುರಾಗಿದೆ.
ಅಲ್ಲದೆ, ವಿಧಾನಸಭೆ ಚುನಾವಣೆ ಮೇಲೆ ಪರಿಷತ್ನ ಹಲವು ಸದಸ್ಯರು ಕೂಡ ಕಣ್ಣಿಟ್ಟಿದ್ದು, ಈ ಬೆಳವಣಿಗೆಯಿಂದ ಆತಂಕ ಉಂಟಾಗಿದೆ.