![hagga](http://kannada.vartamitra.com/wp-content/uploads/2018/04/hagga-572x381.jpg)
ಬೆಂಗಳೂರು, ಏ.11-ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದಂತೆ ಮತದಾರರನ್ನು ಓಲೈಸಿಕೊಳ್ಳಲು ರಾಜಕೀಯ ಪಕ್ಷಗಳು ಹಗ್ಗ ಜಗ್ಗಾಟ ಆರಂಭಿಸಿವೆ.
ಒಂದೆಡೆ ಕಾಂಗ್ರೆಸ್‍ನ ಜನಾರ್ಶೀವಾದ ಯಾತ್ರೆ ಮುಗಿದ ಬೆನ್ನಲ್ಲೆ ಇತ್ತ ಬಿಜೆಪಿ ಮತ ಬೇಟೆಗೆ ಸಜ್ಜಾಗಿದೆ. ಬಿಜೆಪಿಯ ಚುನಾವಣಾ ಚಾಣುಕ್ಯ ಎಂದೇ ಕರೆಯಲ್ಪಡುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ನಾಳೆಯಿಂದ ಎರಡು ದಿನಗಳ ಕಾಲ ಉತ್ತರ ಕರ್ನಾಟಕದಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ಇಂದು ರಾತ್ರಿಯೇ ಹುಬ್ಬಳ್ಳಿಗೆ ಆಗಮಿಸುವ ಅಮಿತ್ ಷಾ ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಧಾರವಾಡದಲ್ಲಿ ಅವರು ಸಂಸದರೊಂದಿಗೆ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ.
ಇತ್ತೀಚೆಗೆ ಪ್ರತಿಪಕ್ಷಗಳು ಸಂಸತ್‍ನ ಉಭಯ ಸದನಗಳಾದ ರಾಜಸಭೆ ಮತ್ತು ಲೋಕಸಭೆಯಲ್ಲಿ ಕಲಾಪ ನಡೆಯಲು ಅವಕಾಶ ನೀಡುತ್ತಿಲ್ಲವೆಂದು ಪ್ರಧಾನಿ ನರೇಂದ್ರ ಮೋದಿ ನಾಳೆ ಒಂದು ದಿನದ ಉಪವಾಸ ಕೈಗೊಳ್ಳಲಿದ್ದಾರೆ.
ಇದಕ್ಕೆ ಬೆಂಬಲ ನೀಡಿರುವ ಅಮಿತ್ ಷಾ ಸಂಸದರೊಂದಿಗೆ ನಾಳೆ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಮುಂದೆ ಸತ್ಯಾಗ್ರಹ ನಡೆಸುವರು. ಇದಕ್ಕೂ ಮುನ್ನ ಬೆಳಗ್ಗೆ 10 ಗಂಟೆಗೆ ಅಮಿತ್ ಷಾ ಅವರು ಹುಬ್ಬಳ್ಳಿಯ ಮೂರುಸಾಲು ಮಠಕ್ಕೆ ಭೇಟಿ ನೀಡಿ ಸದ್ಗುರು ಸಿದ್ಧರೂಢ ಶ್ರೀಗಳ ದರ್ಶನ ಪಡೆಯಲಿದ್ದಾರೆ.
ತದನಂತರ ಅಮಿತ್ ಷಾ ಗದಗ ಜಿಲ್ಲೆ ರೋಣ ತಾಲ್ಲೂಕಿನ ಅಬ್ಬಿಗೆರೆಯ ಅನ್ನದಾನೇಶ್ವರ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆ ಹಾಗೂ ಮುಷ್ಟಿ ಧಾನ್ಯ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ರಮೇಶ್ ಜಿಗಜಿಣಗಿ, ಅನಂತಕುಮಾರ್ ಹೆಗಡೆ, ರಾಜ್ಯ ನಾಯಕರಾದ ಜಗದೀಶ್ ಶೆಟ್ಟರ್, ಈಶ್ವರಪ್ಪ, ಸಂಸದರು, ಶಾಸಕರು ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದ ನಂತರ ಪುಟ್ಟರಾಜು ಗವಾಯಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ. ಶುಕ್ರವಾರ ಅಮಿತ್ ಷಾ ಗಡಿ ಜಿಲ್ಲೆ ಬೆಳಗಾವಿಗೆ ಭೇಟಿ ನೀಡುವರು.
ಮೊದಲು ವೀರರಾಣಿ ಸ್ವಾತಂತ್ರ್ಯ ಸೇನಾನಿ ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡುವರು. ಬಳಿಕ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಸಮಾಧಿ ಇರುವ ನಂದಗಢಕ್ಕೆ ಭೇಟಿ ಕೊಟ್ಟು ಗೌರವ ಸಲ್ಲಿಸಲಿದ್ದಾರೆ.
ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಂಡು ನಂತರ ಗೋಕಾಕ್‍ನಲ್ಲಿ ನಡೆಯಲಿರುವ ರೋಡ್ ಶೋನಲ್ಲಿ ಪಾಲ್ಗೊಳ್ಳುವರು. ನಿಪ್ಪಾಣಿಯ ಮಹಿಳಾ ಸಮಾವೇಶ, ಕೆಎಲ್‍ಇ ವಿದ್ಯಾರ್ಥಿಗಳ ಜೊತೆ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.