ಅಹಿಂದಕ್ಕೆ ಪರ್ಯಾಯವಾಗಿ ಬಿಜೆಪಿ: ಈ ಬಾರಿಯ ಚುನಾವಣೆಯಲ್ಲಿ ಸಂಸದ ಶ್ರೀರಾಮುಲು ಅವರಿಗೆ ವಿಶೇಷ ಆದ್ಯತೆ

ಬೆಂಗಳೂರು, ಏ.11-ಕಾಂಗ್ರೆಸ್‍ನ ಲಿಂಗಾಯಿತ ಧರ್ಮ, ಸಿದ್ದರಾಮಯ್ಯನವರ ಅಹಿಂದಕ್ಕೆ ಪರ್ಯಾಯವಾಗಿ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಸಂಸದ ಶ್ರೀರಾಮುಲು ಅವರಿಗೆ ವಿಶೇಷ ಆದ್ಯತೆ ನೀಡಲು ಮುಂದಾಗಿದೆ.

ಈಗಾಗಲೇ ಶ್ರೀರಾಮುಲುಗೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರಿನಿಂದ ಟಿಕೆಟ್ ಘೋಷಣೆ ಮಾಡಲಾಗಿದೆ. ಕೇವಲ ಅವರನ್ನು ಆ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳಿಸದೆ ರಾಜ್ಯಾದ್ಯಂತ ಹಿಂದುಳಿದ ನಾಯಕನಾಗಿ ಬಿಂಬಿಸಲು ಆರ್‍ಎಸ್‍ಎಸ್ ಚಿಂತಕರ ಛಾವಡಿ ಸಲಹೆ ಮಾಡಿದೆ.
ರಾಜ್ಯದಲ್ಲಿ ಸುಮಾರು 15 ಪರಿಶಿಷ್ಟ ವರ್ಗಕ್ಕೆ ಮೀಸಲಾದ ಕ್ಷೇತ್ರಗಳಿವೆ. ಅದರಲ್ಲೂ ಬಳ್ಳಾರಿಯಲ್ಲಿ 5, ಚಿತ್ರದುರ್ಗದಲ್ಲಿ 2, ದಾವಣಗೆರೆ 1 ಕ್ಷೇತ್ರ ಈ ಸಮುದಾಯಕ್ಕೆ ಮೀಸಲಾಗಿದೆ.

ವಾಲ್ಮೀಕಿ ಸಮುದಾಯಕ್ಕೆ ಸೇರಿರುವ ರಾಮುಲು ಈ 15 ಕ್ಷೇತ್ರಗಳ ಜೊತೆಗೆ ಪರಿಶಿಷ್ಟ ಜಾತಿಯ 26 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಹಿಂದ ಅಸ್ತ್ರಕ್ಕೆ ಪ್ರತ್ಯಾಸ್ತ್ರ ಹೂಡಬೇಕೆಂದು ಸೂಚಿಸಲಾಗಿದೆ.

ಮೊಳಕಾಲ್ಮೂರಿನಲ್ಲಿ ನಿಮ್ಮ ಚುನಾವಣಾ ಉಸ್ತುವಾರಿಯನ್ನು ಬೇರೆಯೊಬ್ಬರು ನೋಡಿಕೊಳ್ಳಲಿದ್ದಾರೆ. ನಿಮ್ಮ ಗೆಲುವಿನ ಬಗ್ಗೆ ಯಾವುದೇ ಸಂದೇಹ ಬೇಡ. ಬದಲಿಗೆ ಇಡೀ ರಾಜ್ಯಾದ್ಯಂತ ನೀವು ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಜೊತೆ ಪ್ರಚಾರ ನಡೆಸಬೇಕೆಂದು ವರಿಷ್ಟರು ಕೂಡ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.

ಮೊದಲು ರಾಮುಲು ವಿಧಾನಸಭೆಯಿಂದ ಸ್ಪರ್ಧಿಸುವುದಾದರೆ ತಾವು ಬಳ್ಳಾರಿ ಗ್ರಾಮೀಣ ಮೀಸಲು ಕ್ಷೇತ್ರದಿಂದ ಸ್ಪರ್ಧಿಸವುದಾಗಿ ರಾಜ್ಯ ನಾಯಕರ ಮುಂದೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಇದಕ್ಕೆ ಒಪ್ಪಿಕೊಳ್ಳದ ಕೇಂದ್ರ ನಾಯಕರು ನೀವು ಮೊಳಕಾಲ್ಮೂರಿನಿಂದ ಸ್ಪರ್ಧಿಸುವುದರ ಜೊತೆಗೆ ಇತರೆ ಜಿಲ್ಲೆಗಳಾದ ರಾಯಚೂರು, ಕೊಪ್ಪಳ , ಯಾದಗಿರಿ, ಚಾಮರಾಜನಗರ, ಮೈಸೂರು, ಮತ್ತಿತರ ಕಡೆ ಪ್ರಚಾರ ನಡೆಸಿ ಅಭ್ಯರ್ಥಿಗಳ ಗೆಲುವಿಗೆ ಸಹಕಾರ ನೀಡಬೇಕೆಂದು ಖುದ್ದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸಲಹೆ ಮಾಡಿದ್ದರು.
ಪ್ರಬಲ ನಾಯಕ ಸಮುದಾಯಕ್ಕೆ ಸೇರಿರುವ ಶ್ರೀ ರಾಮುಲು ಅವರು ಚಿತ್ರದುರ್ಗ, ಕೊಪ್ಪಳ, ದಾವಣಗೆರೆಯಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದಾರೆ.

ಅವರು ಮೊಳಕಾಲ್ಮೂರಿನಲ್ಲಿ ನಿಂತರೆ ಸುತ್ತಮುತ್ತಲಿನ ಇನ್ನೂ ಮೂರ್ನಾಲ್ಕು ಕ್ಷೇತ್ರಗಳನ್ನೂ ತನ್ನ ತೆಕ್ಕೆಗೆ ಹಾಕಿಕೊಳ್ಳಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ.
ಜಗಳೂರು, ಮಾಯಕೊಂಡ, ಹರಪನಹಳ್ಳಿ, ಚಳ್ಳಕೆರೆಯಲ್ಲಿ ನಾಯಕ ಸಮುದಾಯದವರು ಗಣನೀಯ ಪ್ರಮಾಣದಲ್ಲಿರುವುದರಿಂದ ಶ್ರೀರಾಮುಲು ಪ್ರಭಾವದ ಮೂಲಕ ಬಿಜೆಪಿಗೆ ಗೆಲ್ಲುವ ಅವಕಾಶವಿದೆ. ಕಾಂಗ್ರೆಸ್ ತೆಕ್ಕೆಯಲ್ಲಿರುವ ಈ ಕ್ಷೇತ್ರಗಳನ್ನು ಬಿಜೆಪಿ ಗೆದ್ದರೆ ಕಾಂಗ್ರೆಸ್ಸಿಗೆ ಮರ್ಮಾಘಾತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಜಗಳೂರಿನಲ್ಲಿರುವ ಕಾಂಗ್ರೆಸ್ ಶಾಸಕ ಹೆಚ್.ಪಿ.ರಾಜೇಶ್ ಅವರು ಶ್ರೀರಾಮುಲು ಅವರ ಸಂಬಂಧಿಕರೇ ಆಗಿದ್ದಾರೆ. ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ರಾಮಚಂದ್ರಪ್ಪನನ್ನು ಗೆಲ್ಲಿಸುವ ತಂತ್ರ ರಾಮುಲುಗೆ ಗೊತ್ತಿದೆ. ಇನ್ನು, ಮೊಳಕಾಲ್ಮೂರು ಕ್ಷೇತ್ರವು ಬಿಜೆಪಿ ತೆಕ್ಕೆಯಲ್ಲಿದ್ದರೂ ಅಲ್ಲಿ ಹಾಲಿ ಶಾಸಕ ತಿಪ್ಪೇಸ್ವಾಮಿ ಅವರ ಪ್ರಭಾವ ಕುಂಠಿತಗೊಂಡಿದೆ. ಬಿಜೆಪಿಯು ಅಲ್ಲಿ ಸೋಲುವ ಸ್ಥಿತಿಯಲ್ಲಿದೆ. ನಾಯಕ ಸಮುದಾಯ ಬಹಳಷ್ಟಿರುವ ಅಲ್ಲಿ ಶ್ರೀರಾಮುಲು ಅಭ್ಯರ್ಥಿಯಾದರೆ ಬಿಜೆಪಿಗೆ ಸೋಲುವ ಪ್ರಶ್ನೆಯೇ ಇಲ್ಲದಂತಾಗುತ್ತದೆ.

ಜನಾರ್ಧನ ರೆಡ್ಡಿ ಜೈಲು ಪಾಲಾದ ನಂತರ ಹಾಗೂ ಅಮಿತ್ ಷಾ ಹೇಳಿಕೆ ನಂತರ ಬಳ್ಳಾರಿಯಲ್ಲಿ ರೆಡ್ಡಿ ಹಿಡಿತ ದುರ್ಬಲವಾಗಿದೆ. ಅವರ ಅನೇಕ ಆಪ್ತರು ಬಿಜೆಪಿ ತೊರೆದು ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಬಳ್ಳಾರಿಯಲ್ಲಿ ರೆಡ್ಡಿ ಪ್ರಭಾವ ಕುಂಠಿತವಾಗಿರುವುದರಿಂದ ಶ್ರೀರಾಮುಲು ಅವರಿಗೆ ಗಣಿನಾಡಿನ ಅಖಾಡ ಸ್ವಲ್ಪ ಕಷ್ಟವಾಗಬಹುದು.

ಈಗ ಮೊಳಕಾಲ್ಮೂರಿನಲ್ಲಿ ಸ್ಪರ್ಧಿಸುತ್ತಿರುವುದರಿಂದ ಬಳ್ಳಾರಿಯ ಹಿಡಿತ ಸಂಪೂರ್ಣವಾಗಿ ಶ್ರೀರಾಮುಲು ಕೈತಪ್ಪಿಬಿಡಬಹುದೆಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಶ್ರೀರಾಮುಲು ಸೋದರಿ ಶಾಂತಾ ಅವರಿಗೆ ಕೂಡ್ಲಿಗಿಯಲ್ಲಿ ಟಿಕೆಟ್ ಸಿಗುತ್ತಿದೆ, ಬಳ್ಳಾರಿ ಗ್ರಾಮಾಂತರದಲ್ಲಿ ಅವರ ಆಪ್ತ ಫಕೀರಪ್ಪಗೆ ಟಿಕೆಟ್ ಲಭಿಸುತ್ತದೆ. ಇವರಿಬ್ಬರನ್ನು ಗೆಲ್ಲಿಸಲು ಶ್ರೀರಾಮುಲು ಬಳ್ಳಾರಿ ರಾಜಕೀಯಕ್ಕೆ ಎಂಟ್ರಿ ಕೊಡಬೇಬೇಕಾಗುತ್ತದೆ. ಒಂದು ವೇಳೆ, ಬಳ್ಳಾರಿಯಲ್ಲೂ ಬಿಜೆಪಿಯನ್ನು ಗೆಲ್ಲಿಸಲು ಶ್ರೀರಾಮುಲು ಯಶಸ್ವಿಯಾದಲ್ಲಿ ಅವರು ಒಬ್ಬ ರಾಜ್ಯಮಟ್ಟದ ನಾಯಕನೆನಿಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ