ಹಾಸನ:ಏ-11: ನೀತಿ ಸಂಹಿತೆ ಜಾರಿ ಇದ್ದರೂ ಜಿಲ್ಲಾ ಉಸ್ತುವಾರಿ ಸಚಿವರ ಸರ್ಕಾರಿ ಕಚೇರಿ ಬಳಕೆ ಆರೋಪ ಸಂಬಂಧ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಮುಖ್ಯ ಚುನಾವಣಾಧಿಕಾರಿಗೆ ಹಾಸನ ಡಿಸಿ ರೋಹಿಣಿ ಸಿಂಧೂರಿ ಪತ್ರ ಬರೆದಿದ್ದಾರೆ.
ಪ್ರವಾಸ ಮಂದಿರ ಉಸ್ತುವಾರಿ ವಹಿಸಿದ್ದ ಸಹಾಯಕ ಕಾರ್ಯಪಾಲಕ ಅಭಿಯಂತರ ಗುರುಲಿಂಗಪ್ಪ ವಿಚಾರಣೆ ಕಾಯ್ದಿರಿಸಿ ಅಮಾನತಿನಲ್ಲಿರಿಸುವಂತೆ ಹಾಗೂ ಕಾರ್ಯಪಾಲಕ ಎಂಜಿನಿಯರ್ ಎನ್.ನಾಗರಾಜು ಅವರನ್ನು ವರ್ಗಾವಣೆ ಮಾಡುವಂತೆ ಡಿಸಿ ಪತ್ರದಲ್ಲಿ ತಿಳಿಸಿದ್ದಾರೆ. ನಾಗರಾಜು ಅವರ ವಿರುದ್ಧವೂ ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇನ್ನು ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಹಾಸನ ಜಿಲ್ಲೆಯಾದ್ಯಂತ 10 ಎಫ್ಐಆರ್ ದಾಖಲಾಗಿವೆ. ಮೂರು ಅಬಕಾರಿ ಪರವಾನಗಿ ರದ್ದು ಮಾಡಲಾಗಿದೆ ಎಂದು ಡಿಸಿ ರೋಹಿಣಿ ಸಿಂಧೂರಿ ಮಾಹಿತಿ ನೀಡಿದ್ದಾರೆ.
ಸಚಿವರ ಕಚೇರಿ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಮಾಧ್ಯಮ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ. ಸಚಿವರ ಉತ್ತರ ತೃಪ್ತಿಕರವಾಗಿಲ್ಲದ್ದರಿಂದ ಕೇಸ್ ದಾಖಲು ಮಾಡಲಾಗಿದೆ ಎಂದು ಸಚಿವರ ಮೇಲಿನ ಎಫ್ಐಆರ್‌ಗೆ ಸಿಂಧೂರಿ ಸಮರ್ಥನೆ ನೀಡಿದರು.
ಹೊಸ ಸರ್ಕಾರ ರಚನೆಯಾಗುವವರೆಗೂ ಕಚೇರಿ ಬಳಕೆಗೆ ಕಾನೂನಿನಲ್ಲೇ ಅವಕಾಶವಿದೆ ಎಂದು ಹೇಳಿದ್ದ ಸಚಿವ ಎ. ಮಂಜು ಹೇಳಿಕೆಗೆ ತಿರುಗೇಟು ನೀಡಿದ ಸಿಂಧೂರಿ, ಚುನಾವಣೆ ಘೋಷಣೆ ಬಳಿಕ ಉಸ್ತುವಾರಿ ಸಚಿವ ಎಂಬ ಹುದ್ದೆಯೇ ಇರೋದಿಲ್ಲ. ಸಚಿವರು ಬೆಂಗಳೂರು ಕಚೇರಿ ಉಪಯೋಗಿಸಲು ಮಾತ್ರ ಕಾನೂನಿನಲ್ಲಿ ಅವಕಾಶವಿದೆ. ಜಿಲ್ಲಾ ಉಸ್ತುವಾರಿ ಕಚೇರಿ ಉಪಯೋಗಿಸಲು ಅವಕಾಶ ಇಲ್ಲ ಎಂದು ವಿವರಿಸಿದ್ದಾರೆ.
Code of Conduct violation,DC Rohini Sindhuri,Chief Election Commissioner,Letter