ಬೆಂಗಳೂರು,ಏ.10- ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿಯನ್ನು ಜಾರಿಗೆ ತರದ ಕಾಂಗ್ರೆಸ್ ಸರ್ಕಾರವನ್ನು ಮುಂದಿನ ಚುನಾವಣೆಯಲ್ಲಿ ಅನಿವಾರ್ಯವಾಗಿ ಬಹಿಷ್ಕರಿಸಲಾಗುವುದು ಎಂದು ಕರ್ನಾಟಕ ಮಾದಿಗ ದಂಡೋರ ಸಮಿತಿ ರಾಜ್ಯಾಧ್ಯಕ್ಷ ಎಂ.ಶಂಕರಪ್ಪ ತಿಳಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸದಾಶಿವ ಆಯೋಗ ವರದಿಯನ್ನು ಅನುಷ್ಠಾನಗೊಳಿಸದ ಕಾರಣ ಮಾದಿಗ ಮತ್ತು ಅದಕ್ಕೆ ಸಂಬಂಧಿಸಿದ ಜಾತಿಗಳು ಕಾಂಗ್ರೆಸ್ಗೆ ಮತ ನೀಡದೆ ಸೋಲಿಸಲಾಗುವುದು ಎಂದರು.
ರಾಜ್ಯದಲ್ಲಿ 224 ವಿಧಾನಸಭಾ ಕ್ಷೇತ್ರಗಳಲ್ಲಿ 30 ಸಾವಿರಕ್ಕೂ ಹೆಚ್ಚು ಮಾದಿಗ ಮತ್ತು ಅದರ ಸಂಬಂಧಿತ ಜಾತಿ ಮತದಾರರಿದ್ದು ಅವರು ನಿರ್ಣಾಯಕ ಮತದಾರರಾಗಿದ್ದಾರೆ ಎಂದು ಹೇಳಿದರು.
36 ಮೀಸಲು ಕ್ಷೇತ್ರಗಳ ಪೈಕಿ ಮಾದಿಗ ಸಮಾಜವು ಹೆಚ್ಚು ಜನಸಂಖ್ಯೆ ಹೊಂದಿದ್ದು, 18-20 ಮೀಸಲು ಕ್ಷೇತ್ರಗಳನ್ನು ಗುರುತಿಸಿ ಮಾದಿಗ ಸಮಾಜದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಹೆಚ್ಚಿನ ಕ್ಷೇತ್ರಗಳನ್ನು ಮಾದಿಗ ಸಮಾಜಕ್ಕೆ ಮೀಸಲಿಡುವ ರಾಜಕೀಯ ಪಕ್ಷಕ್ಕೆ ಬೆಂಬಲ ನೀಡುತ್ತೇವೆ ಎಂದರು.
ಖಾಲಿ ಇರುವ ಮೀಸಲು ಹುದ್ದೆಗಳನ್ನು ಚುನಾವಣೆ ನಂತರ ಭರ್ತಿ ಮಾಡುವ ಭರವಸೆ ನೀಡುವ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಹೇಳಿದರು.