ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ

 

ಬೆಂಗಳೂರು,ಏ.10- ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ವಿರೋಧಿಸಿ ಇಂದು ಮೈಸೂರು ಬ್ಯಾಂಕ್ ವೃತ್ತದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಇದೇ ವೇಳೆ ಸಮಿತಿಯ ರಾಜ್ಯಾಧ್ಯಕ್ಷ ಎನ್.ಮೂರ್ತಿ ಮಾತನಾಡಿ, ದೇಶದಾದ್ಯಂತ ಪರಿಶಿಷ್ಟ ಜಾತಿ/ಪಂಗಡದವರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ, ಹಲ್ಲೆ, ಕೊಲೆ ಹತ್ತಿಕ್ಕಲು ರಾಜ್ಯ ಮತ್ತು ಕೇಂಧ್ರ ಸರ್ಕಾರಗಳು ಕ್ರಮ ಕೈಗೊಳ್ಳದೆ ಇರುವುದನ್ನು ಖಂಡಿಸಿ ಈ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ದಸಂಸದ ಮೂರ್ತಿ ಹೇಳಿದರು.
ಇದರ ಜೊತೆಗೆ ಪರಿಶಿಷ್ಟ ಜಾತಿ ವರ್ಗಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವುದಾಗಿ ಅವರು ತಿಳಿಸಿದರು.

ದಲಿತರ ದೌರ್ಜನ್ಯ ತಡೆ ಕಾಯ್ದೆಯಡಿ ದೇಶದಲ್ಲಿ ಆಗುತ್ತಿರುವ ಪ್ರಕರಣಗಳಲ್ಲಿ ಶೇ.2ರಷ್ಟು ಸಹ ಅಪರಾಧಿಗಳಿಗೆ ಶಿಕ್ಷೆಯಾಗುತ್ತಿಲ್ಲ. ಬದಲಿಗೆ ಬಿಡುಗಡೆಯಾಗುತ್ತಿದ್ದಾರೆ. ಇದನ್ನೇ ನೆಪವಾಗಿಸಿಕೊಂಡು ಸುಪ್ರೀಂಕೋರ್ಟ್‍ನಲ್ಲಿ ಪರಿಶಿಷ್ಟ ಜಾತಿ/ ವರ್ಗಗಳ ದೌರ್ಜನ್ಯ ಕಾಯ್ದೆಯಡಿ ದಾಖಲಾಗುವ ಕೆಲವು ಪ್ರಕರಣಗಳಿಗೆ ಸರಿಯಾದ ತೀರ್ಪು ನೀಡದೇ ಇರುವುದು ದುರದೃಷ್ಟಕರವಾಗಿದೆ ಎಂದರು.

ನರೇಂದ್ರ ಮೋದಿ ದಲಿತ ವಿರೋಧಿಯಾಗಿದ್ದು ದಲಿತರ ಪರವಾಗಿ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಜಾಣ ಮೌನ ವಹಿಸಿದ್ದಾರೆ. ಈ ಮೌನ ದಲಿತರ ವಿರೋಧಿಯಾಗಿದೆ ಎಂದರು.
ಅಲ್ಲದೆ ಅವರ ಮನಸ್ಥಿತಿ ಮನುವಾದದ ಪರಿಸ್ಥಿತಿಯಾಗಿದೆ. ಜಾತಿವಾದ ಕೋಮುವಾದಕ್ಕೆ ಬಿಜೆಪಿ ಪ್ರಚೋದನೆ ನೀಡುತ್ತಿದೆ ಎಂದರು.

ಉದಾಹರಣೆಗೆ ಕಂಬಾಲಪಲ್ಲಿಯಲ್ಲಿ ಎಂಟು ಮಂದಿ ದಲಿತರ ಮೇಲೆ ನರಮೇಧ ಮಾಡಿದ ಕೊಲೆಗಡುಕರಿಗೆ ಶಿಕ್ಷೆಯಾಗಲಿಲ್ಲ. ಬದಲಿಗೆ ಬಿಡುಗಡೆ ಮಾಡಿದರು. ಸುಪ್ರೀಂಕೋರ್ಟ್ ನೀಡುವ ತೀರ್ಪಿನಿಂದಾಗಿ ದೇಶಾದ್ಯಂತ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ದಲಿತರು ದಿಕ್ಕೆಟ್ಟು ತಲ್ಲಣಗೊಂಡಿದ್ದಾರೆ ಎಂದರು.

ಸುಪ್ರೀಂಕೋರ್ಟ್ ಆದೇಶ ಸಂವಿಧಾನ ವಿರೋಧಿ ತೀರ್ಪಾಗಿದೆ. ಕೂಡಲೇ ಬಡ್ತಿ ಮೀಸಲಾತಿ ಮತ್ತು ದೌರ್ಜನ್ಯ ತಡೆ ಕಾಯ್ದೆ ಪರವಾಗಿ ಸುಪ್ರೀಂಕೋರ್ಟ್‍ನಲ್ಲಿ ಸಮರ್ಥ ವಾದ ಮಂಡಿಸಬೇಕು. ಇಲ್ಲದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಸರ್ಕಾರವನ್ನು ಬಹಿಷ್ಕರಿಸುತ್ತೇವೆ ಎಂದರು.
ಪ್ರತಿಭಟನಾಕಾರರು ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ