ಬೆಂಗಳೂರು, ಏ.9- ಮತದಾರರ ಪಟ್ಟಿಗೆ ಹೆಸರು ಸೇರಿಸುವ ಉದ್ದೇಶದಿಂದ ಚುನಾವಣಾ ಆಯೋಗ ನಿನ್ನೆ ಹಮ್ಮಿಕೊಂಡಿದ್ದ ಮಿಂಚಿನ ನೋಂದಣಿ ಪ್ರಕ್ರಿಯೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
28 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 8287 ಮತದಾನ ಕೇಂದ್ರಗಳಲ್ಲಿ ನಿನ್ನೆ ಒಂದೇ ದಿನ 1,24,164 ಮಂದಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ.
ಮಹದೇವಪುರದಲ್ಲಿ ಅತಿ ಹೆಚ್ಚು ನಾಗರಿಕರು ತಮ್ಮ ಹೆಸರುಗಳನ್ನು ಮತಪಟ್ಟಿಗೆ ಸೇರ್ಪಡೆ ಮಾಡಿಕೊಂಡಿದ್ದರೆ, ಪುಲಿಕೇಶಿ ನಗರದಲ್ಲಿ ಅತಿ ಕಡಿಮೆ ಮಂದಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಮಹದೇವಪುರದಲ್ಲಿ 18,472 ಮಂದಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರೆ, ಪುಲಿಕೇಶಿನಗರದಲ್ಲಿ ಕೇವಲ 1540 ಮಂದಿ ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆ ಮಾಡಿಸಿಕೊಂಡಿದ್ದಾರೆ.
ಮತದಾರರ ಮಿಂಚಿನ ನೋಂದಣಿ ಪ್ರಕ್ರಿಯೆಯಲ್ಲಿ ಬೂತ್ ಮಟ್ಟದ ಎಲ್ಲ ಅಧಿಕಾರಿಗಳು ತಪ್ಪದೆ ಭಾಗವಹಿಸಬೇಕು ಎಂದು ಚುನಾವಣಾ ಆಯೋಗ ಸೂಚನೆ ನೀಡಿತ್ತು. ನಿನ್ನೆ ನಡೆದ ಮಿಂಚಿನ ನೋಂದಣಿಯಲ್ಲಿ 7313 ಬಿಎಲ್ಒಗಳು ಪಾಲ್ಗೊಂಡಿದ್ದರೆ, 974 ಬಿಎಲ್ಒಗಳು ಗೈರು ಹಾಜರಾಗಿದ್ದರು.
ಒಟ್ಟಾರೆ ನಿನ್ನೆ ನಡೆದ ಮಿಂಚಿನ ನೋಂದಣಿ ಕಾರ್ಯದಲ್ಲಿ ಬಿಬಿಎಂಪಿ ವ್ಯಾಪ್ತಿಯ ಕೆಆರ್ ಪುರ, ಮಹದೇವಪುರ, ಆನೇಕಲ್, ದಾಸರಹಳ್ಳಿ, ಯಶವಂತಪುರ, ಬ್ಯಾಟರಾಯನಪುರ, ಯಲಹಂಕ, ಬೆಂಗಳೂರು ಸೌತ್, ಹೆಬ್ಬಾಳ ಮತ್ತಿತರ ವಿಧಾನಸಭಾ ಕ್ಷೇತ್ರಗಳಲ್ಲಿ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ.
ನಿನ್ನೆ ನೋಂದಾಯಿಸಿಕೊಂಡ 1,24,164 ಮಂದಿಗೆ ಆದಷ್ಟು ಬೇಗ ಗುರುತಿನ ಚೀಟಿ ನೀಡಿ ಮೇ 12ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆ ಮತದಾನದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.