ಚುನಾವಣಾ ಕರ್ತವ್ಯ ನಿರ್ಲಕ್ಶ: ಅರಕಲಗೂಡು ತಹಶೀಲ್ದಾರ್ ಪ್ರಸನ್ನಮೂರ್ತಿ ಅಮಾನತುಗೊಳಿಸಲು ಜಿಲ್ಲಾಚುನಾವಣಧಿಕಾರಿ ಶಿಫಾರಸು

 

ಬೆಂಗಳೂರು, ಏ.9-ಚುನಾವಣಾ ಕರ್ತವ್ಯವನ್ನು ನಿರ್ಲಕ್ಷಿಸಿದ ಉಪವಿಭಾಗಾಧಿಕಾರಿಯನ್ನು ಅಮಾನತು ಮಾಡಿರುವ ಚುನಾವಣಾ ಆಯೋಗ ಮತ್ತೊಬ್ಬ ತಹಶೀಲ್ದಾರ್ ಅವರನ್ನು ಅಮಾನತುಗೊಳಿಸಲು ಮುಂದಾಗಿದೆ.

ಮಂಡ್ಯ ಜಿಲ್ಲೆಗೆ ಉಪವಿಭಾಗಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದ ಕಿರಿಯ ಶ್ರೇಣಿ ಕೆಎಎಸ್ ಅಧಿಕಾರಿ ಡಾ.ಸುರೇಶ್ ಅವರನ್ನು ಅಮಾನತುಗೊಳಿಸಲಾಗಿದೆ. ಅರಕಲಗೂಡು ತಹಶೀಲ್ದಾರ್ ಪ್ರಸನ್ನಮೂರ್ತಿ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅಮಾನತುಗೊಳಿಸಲು ಜಿಲ್ಲಾಧಿಕಾರಿ ಶಿಫಾರಸು ಮಾಡಿದ್ದಾರೆ.

ಬಾಗಲಕೋಟೆ ಜಿಲ್ಲೆ ಬೀಳಗಿ ಕೃಷ್ಣ ಮೇಲ್ದಂಡೆ ಯೋಜನೆಯ ಅಪರ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿದ್ದ ಡಾ.ಸುರೇಶ್ ಅವರನ್ನು ಚುನಾವಣೆ ಘೋಷಣೆಯಾದ ನಂತರ ಮಾ.31 ರಂದು ಮಂಡ್ಯ ಜಿಲ್ಲೆಗೆ ವರ್ಗಾವಣೆ ಮಾಡಲಾಗಿತ್ತು.

ಉಪವಿಭಾಗಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಚುನಾವಣೆ ಕರ್ತವ್ಯ ನಿರ್ವಹಿಸದೆ ಆಯೋಗದ ನಿರ್ದೇಶನ ಉಲ್ಲಂಘಿಸಿದ್ದರಿಂದ ಸುರೇಶ್ ಅವರನ್ನು ಅಮಾನತು ಮಾಡಲಾಗಿದೆ.

ಮೇಲ್ನೋಟಕ್ಕೆ ಸುರೇಶ್ ಅವರದು ಕರ್ತವ್ಯಲೋಪ ಎಂದು ಕಂಡು ಬಂದಿರುವುದರಿಂದ ತತ್‍ಕ್ಷಣ ಅಮಾನತುಗೊಳಿಸಲಾಗಿದ್ದು, ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಲಾಗಿದೆ.
ಅಮಾನತ್ತಿನ ಅವಧಿಯಲ್ಲಿ ಸುರೇಶ್ ಅವರು ಜೀವನಾಧಾರ ಪಡೆಯಲು ಅರ್ಹರಿದ್ದಾರೆ. ಸಮಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಷರತ್ತು ವಿಧಿಸಲಾಗಿದೆ.

ಸುರೇಶ್ ಅವರು ಜವಾಬ್ದಾರಿಯುತ ಕೆಎಎಸ್ ಅಧಿಕಾರಿಯಾಗಿದ್ದು, ಆಯೋಗದ ಸೂಚನೆಯಂತೆ ನಡೆದ ವರ್ಗಾವಣೆಯನ್ನು ಅನುಸರಿಸಿಲ್ಲ, ಬದಲಾಗಿ ದೂರವಾಣಿ ಸಂಪರ್ಕಕ್ಕೂ ಸಿಕ್ಕಿಲ್ಲ ಎಂದು ಏ.2 ರಂದು ಮಂಡ್ಯ ಜಿಲ್ಲಾಧಿಕಾರಿ ಆಯೋಗಕ್ಕೆ ವರದಿ ನೀಡಿದ್ದರು.

ಅಧಿಕಾರಿ ನಿರ್ಲಕ್ಷ್ಯದಿಂದ ಚುನಾವಣೆ ಕೆಲಸಕ್ಕೆ ತೊಂದರೆಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಅಮಾನತುಗೊಳಿಸಲಾಗಿದೆ. ಚುನಾವಣಾ ಕರ್ತವ್ಯ ಬಹುಪ್ರಮುಖವಾಗಿದ್ದು, ಕರ್ತವ್ಯ ಲೋಪವೆಸಗಿರುವ ಬಗ್ಗೆ ನೋಟೀಸ್ ನೀಡಿ 24 ಗಂಟೆಗಳೊಳಗಾಗಿ ಹೇಳಿಕೆ ಸಲ್ಲಿಸುವಂತೆ ಕಾಲಾವಕಾಶ ನೀಡಲಾಗಿತ್ತು.

ಆದರೆ ಅವರಿಂದ ಯಾವುದೇ ಉತ್ತರ ಬಾರದೆ ಇದ್ದುದರಿಂದ ಅಮಾನತ್ತಿನ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಅರಕಲಗೂಡು ತಹಶೀಲ್ದಾರ್ ಮತ್ತು ತಾಲೂಕು ಚುನಾವಣಾಧಿಕಾರಿ ಪ್ರಸನ್ನಮೂರ್ತಿ ಅವರು ಬಗರ್‍ಹುಕುಂ ಸಾಗುವಳಿ ಭೂಮಿ ಹಂಚಿಕೆಯ ಪ್ರಕ್ರಿಯೆಯನ್ನು ಚುನಾವಣೆ ದಿನಾಂಕ ಘೋಷಣೆಯಾದ ನಂತರ ನಡೆಸಿದ್ದು, ದಾಖಲೆಗಳಲ್ಲಿ ಹಳೆಯ ದಿನಾಂಕ ನಮೂದಿಸಿರುವುದು ಸ್ಪಷ್ಟವಾದ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆಯೋಗಕ್ಕೆ ಶಿಫಾರಸು ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ