ಹಿರಿಯ ಚೇತನ ಡಾ.ಪ್ರಭುಶಂಕರ್ ನಿಧನಕ್ಕೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಸಂತಾಪ

ಬೆಂಗಳೂರು, ಏ.9- ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದ ಹಿರಿಯ ಚೇತನ ಡಾ.ಪ್ರಭುಶಂಕರ್ ಅವರು ನಮ್ಮನ್ನಗಲಿರುವುದು ವಿಷಾದನೀಯ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಶೋಕ ವ್ಯಕ್ತಪಡಿಸಿದ್ದಾರೆ.

ಡಾ.ಪ್ರಭುಶಂಕರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಶ್ರೀಗಳು ಹಿರಿಯ ಸಾಹಿತಿಗಳು, ವಿದ್ವಾಂಸರೂ ಆಗಿದ್ದ ಇವರು ರಾಷ್ಟ್ರಕವಿ ಕುವೆಂಪು ಅವರ ಆತ್ಮೀಯ ಶಿಷ್ಯರಾಗಿದ್ದರು. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾಗಿ, ಕುವೆಂಪು ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾಗಿ, ಬನಾರಸ್ ಹಿಂದೂ ವಿವಿಯ ಪ್ರಥಮ ಕನ್ನಡ ಪ್ರಾಧ್ಯಾಪಕರಾಗಿ ಅವರು ಸಲ್ಲಿಸಿದ ಸೇವೆ ಅವಿಸ್ಮರಣೀಯ ಎಂದರು.

ಕೇವಲ ಪಠ್ಯವನ್ನಷ್ಟೇ ಬೋಧಿಸದೆ ವಿದ್ಯಾರ್ಥಿಗಳಿಗೆ ನೈತಿಕತೆ ಬೋಧಿಸಿ ಅವರನ್ನು ಸನ್ಮಾರ್ಗದೆಡೆಗೆ ಮುನ್ನಡೆಸುವ ಕೈಂಕರ್ಯದಲ್ಲಿ ತೊಡಗಿದ್ದು, ಶಿಷ್ಯವರ್ಗದ ಅಪಾರ ಗೌರವಾದರಗಳಿಗೆ ಪಾತ್ರರಾಗಿದ್ದರು. ಯುವ ಪೀಳಿಗೆಯ ಭವಿಷ್ಯದ ಬದುಕನ್ನು ಸಶಕ್ತಗೊಳಿಸುವಲ್ಲಿ ತಮ್ಮ ಇಡೀ ಬದುಕನ್ನೇ ಸಮರ್ಪಿಸಿಕೊಂಡಿದ್ದರು.

ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ ಅಪಾರ ಪಾಂಡಿತ್ಯ ಹೊಂದಿದ್ದ ಇವರು ಕುವೆಂಪು ಅವರ ಹಲವು ಕೃತಿಗಳನ್ನು ಇಂಗ್ಲಿಷ್‍ಗೆ ಭಾಷಾಂತರಿಸಿದ್ದು, ಹಲವು ಕಾದಂಬರಿ, ನಾಟಕ, ವ್ಯಕ್ತಿ ಚಿತ್ರಗಳು, ಪ್ರವಾಸ ಕಥನಗಳು ಮುಂತಾದ ಕೃತಿಗಳನ್ನು ರಚಿಸಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದರು.

ಇವರ ನಿಧನದಿಂದ ದುಃಖತಪ್ತರಾಗಿರುವ ಕುಟುಂಬ ವರ್ಗ ಹಾಗೂ ಅಭಿಮಾನಿ ವೃಂದಕ್ಕೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಹಾಗೂ ಶ್ರೀಯುತರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಶ್ರೀಗಳು ಪ್ರಾರ್ಥಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ